ತೇರದಾಳದ ಮುಖ್ಯ ರಸ್ತೆಯಲ್ಲಿ ಹಳಿಂಗಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತೇರದಾಳದ ಮುಖ್ಯ ರಸ್ತೆಯಲ್ಲಿ ಹಳಿಂಗಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ಶಾಶ್ವತ ಪುನರ್ ವಸತಿಗಾಗಿ ಹಳಿಂಗಳಿ ಗ್ರಾಮಸ್ಥರ ಪ್ರತಿಭಟನೆ
ತೇರದಾಳ : ತಮದಡ್ಡಿ ಗ್ರಾಮಕ್ಕೆ ಕೃಷ್ಣಾ ನದಿ ಪ್ರವಾಹ ಬಂದಾಗ ಹಳಿಂಗಳಿ ಗ್ರಾಮಕ್ಕೂ ನೀರು ಬರುತ್ತದೆ ಹಾಗೂ ಗ್ರಾಮದಲ್ಲಿನ ಮನೆಗಳು ಮತ್ತು ಬೆಳೆಗಳು ಜಲಾವೃತವಾಗುತ್ತವೆ. ನಮ್ಮ ಹಳಿಂಗಳಿ ಗ್ರಾಮವನ್ನು ನಿರಾಶ್ರಿತವೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಹಳಿಂಗಳಿ ಗ್ರಾಮದ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ಹಳಿಂಗಳಿ ಗ್ರಾಮದಲ್ಲಿಯೂ ಕೃಷ್ಣಾ ನದಿಯ ಪ್ರವಾಹ ಬರುತ್ತದೆ. ಪ್ರತಿವರ್ಷ ಪ್ರವಾಹ ಬಂದಾಗ ಹಳಿಂಗಳಿ ಗ್ರಾಮವನ್ನು ಸ್ಥಳಾಂತರ ಮಾಡಿ ಎಂದು ನಾವು ತಹಶೀಲ್ದಾರರಿಗೆ ಮನವಿ ಕೊಡುತ್ತಾ ಬಂದಿದ್ದೇವೆ. ಮದಲಮಟ್ಟಿ ಗ್ರಾಮದಲ್ಲಿ ನೀರು ಬರದೆಯಿದ್ದರೂ ಆ ಗ್ರಾಮವನ್ನು ಸ್ಥಳಾಂತರ ಮಾಡುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ನೀರು ಬಂದರೂ ಸ್ಥಳಾಂತರ ಮಾಡುತ್ತಿಲ್ಲ ಇಲ್ಲಿ ಶಾಸಕರು ಮಲತಾಯಿ ಧೊರಣೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹಳಿಂಗಳಿ ಗ್ರಾಮದಲ್ಲಿ ಮೂರುವರೆ ಸಾವಿರ ಕುಟುಂಬಗಳು ವಾಸಿಸುತ್ತಿದ್ದು ಅದರಲ್ಲಿ 1008 ಕುಟುಂಬಗಳನ್ನು ಮುಳುಗಡೆ ಮಾಡಿದ್ದಾರೆ. ಹಾಗೂ 1400 ಎಕರೆ ಜಮೀನು ನಮ್ಮದು ಅದರಲ್ಲಿ ಕೃಷ್ಣಾ ನದಿ ನೀರಿಗೆ ಸಂಪೂರ್ಣ ಜಲಾವೃತವಾಗಿ 10-20 ಎಕರೆ ಮಾತ್ರ ಉಳಿಯುತ್ತಿದೆ. ಹಳಿಂಗಳಿ ಗ್ರಾಮವು ಭದ್ರಗಿರಿಯವರೆಗೆ ಬೆಳೆಯುತ್ತಿದೆ ಅದೇ ಜಾಗವನ್ನು ನಮ್ಮ ಗ್ರಾಮದ ಜನರಿಗೆ ಕೊಡಬೇಕು. ತಮದಡ್ಡಿ ಗ್ರಾಮದ ಜನರಿಗೆ ಬೇರೆ ಕಡೆಗೆ ಕೊಡಬೇಕು. ನಮ್ಮೂರ ಮುಂದಿನ ಜಾಗೆಯನ್ನು ನಮಗೆ ಕೊಡಬೇಕು ಎಂದು ಒತ್ತಾಯ ಮಾಡಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಲಲಿತಾ ನಂದೆಪ್ಪನವರ ಹಾಗೂ ಗ್ರಾಪಂ ಅಧ್ಯಕ್ಷ ಶೋಭಾ ಕೇಬೋಜಿ ಮಾತನಾಡಿ ಕೃಷ್ಣಾ ನದಿ ಪ್ರವಾಹಕ್ಕೆ ಸಿಕ್ಕು ಮನೆಗಳು ನಾಶವಾಗಿವೆ, ಜಮೀನುಗಳಲ್ಲಿ ಎಲ್ಲ ಬೆಳೆಗಳು ನಾಶವಾಗಿವೆ. ನಮಗೆ ಇರಲಿಕ್ಕೆ ಎಲ್ಲಿಯೂ ಜಾಗೆಯಿಲ್ಲ. ಹಳಿಂಗಳಿ ಗುಡ್ಡದಲ್ಲಿರುವ ಜಾಗೆಯನ್ನು ನಮಗೆ ಕೂಡಬೇಕು ಎಂದರು.
ಯುವ ಧುರೀಣ ಪ್ರವೀಣ ನಾಡಗೌಡ ಮಾತನಾಡಿ ಸರಕಾರ ಹಳಿಂಗಳಿ ಗ್ರಾಮಕ್ಕೆ ಪುನರ್ ವಸತಿ ಜಾಗೆಯನ್ನು ಮಂಜೂರು ಮಾಡಿಲ್ಲ. ತಮದಡ್ಡಿ ಹಳಿಂಗಳಿ ಎರಡು ಗ್ರಾಮಗಳು ಮುಳುಗಡೆಯಾಗಿರುತ್ತವೆ. ಪ್ರತಿವರ್ಷ ಮಳೆಯಾಗಿ ಮುಳುಗಡೆಯಾಗುತ್ತವೆ. ಸಾಕಷ್ಟು ಕಂದಾಯ ಜಮೀನು ಇರುವುದರಿಂದ ಎರಡು ಗ್ರಾಮಗಳಿಗೂ ಸರಿಯಾಗಿ ಸರ್ವೆ ಮಾಡಿ ಮಂಜೂರು ಮಾಡಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.
ತಹಶಿಲ್ದಾರ ಸಂಜಯ ಇಂಗಳೆ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳು ಮುಖಾಂತರ ಸರಕಾರಕ್ಕೆ ತಮ್ಮ ಬೇಡಿಕೆಗಳನ್ನು ಮುಟ್ಟಿಸುವಂತ ಕೆಲಸವನ್ನು ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ, ಪ್ರಭಾರಿ ಆಹಾರ ನಿರೀಕ್ಷಕ ಪಿ.ಎಸ್.ಮಠಪತಿ, ರಾಜು ನಂದೆಪ್ಪನವರ ಸೇರಿದಂತೆ ಹಳಿಂಗಳಿ ಗ್ರಾಮದ ನೂರಾರು ಜನ ಗ್ರಾಮಸ್ಥರು ಇದ್ದರು.
ಬಿಗಿ ಬಂದೂಬಸ್ತ್ : ಪಿಎಸ್‍ಐ ರಾಜು ಬೀಳಗಿ, ಹಾಗೂ ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಶಿ ಹಾಗೂ ಪೋಲಿಸ್ ಸಿಬ್ಬಂದಿಯವರು ಸೂಕ್ತ ಬಂದೂಬಸ್ತ್‍ಗೆ ಕ್ರಮ ಕೈಗೊಂಡಿದ್ದರು.
Social Plugin