ವರದಿ : ಮಲ್ಲಿಕಾರ್ಜುನ ಘೋಸರವಾಡ

ಘಟಪ್ರಭಾ: ಮೈಸೂರಿನಲ್ಲಿ 2 ದಿನದ ಹಿಂದೆ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆ ಬೆನ್ನಲೆ ಘಟಪ್ರಭಾ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಜಾಪೂರ ಗ್ರಾಮದಲ್ಲಿ 5 ಜನ ಕಾಮುಕರಿಂದ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಬಗ್ಗೆ ಗುರುವಾರ ತಡ ರಾತ್ರಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಘಟಪ್ರಭಾ ಪೊಲೀಸರು 4 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಐದು ಜನ ಆರೋಪಿಗಳ ಮೇಲೆ ಬಾಲಕಿಯ ತಂದೆ ದೂರು ನೀಡಿದ್ದು, ಅದರಲ್ಲಿ ನಾಲ್ಕು ಜನ ಆರೋಪಿಗಳು ಪೊಲೀಸರ ವಶದಲ್ಲಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಗೋಕಾಕ ಡಿವೈಎಸ್‌ಪಿ ಮನೋಜ ಕುಮಾರ ನಾಯ್ಕ ಘಟಪ್ರಭಾ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ ಬ್ಯಾಕೂಡ್ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ಹಿನ್ನಲೆ: ಈ ಪ್ರಕರಣ ಸುಮಾರು 45 ದಿನಗಳ ಹಿಂದೆ ಘಟಪ್ರಭಾ ಪೊಲೀಸ್ ಠಾಣೆಯ ವ್ಯಾಪ್ತಿಯ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆದಿದ್ದು, ಸಂತ್ರಾಸ್ತೆ ಪ್ರಾರಂಭದಲ್ಲಿ ಬೆಳಗಾವಿಯ ಉಜ್ವಲ ಮಹಿಳಾ ಸ್ವಾಂತ್ವನ ಕೇಂದ್ರಕ್ಕೆ ಸಂಪರ್ಕಿಸಿ ಅವರಲ್ಲಿ ಆಶ್ರಯ ಪಡೆದು ನಂತರ ಘಟಪ್ರಭಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುವುದಾಗಿ ತಿಳಿದು ಬಂದಿದೆ.