ತೇರದಾಳ ಪಟ್ಟಣದಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದ ಮಾಜಿ ಸಚಿವೆ ಉಮಾಶ್ರೀ.
ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದ ಉಮಾಶ್ರೀ
ತೇರದಾಳ: ವಿಶ್ವವ್ಯಾಪಿಯಾಗಿ ಇಡಿ ಮನುಕುಲವನ್ನೆ ತಲ್ಲಣಗೊಳಿಸಿದ ಮಹಾಮಾರಿ ಕೋವಿಡ್-19 ರ ಸಾಂಕ್ರಾಮಿಕತೆಯಿಂದ ಮೃತಪಟ್ಟ ಕುಟುಂಬದವರ ಮನೆ-ಮನೆಗೆ ತೆರಳಿದ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ನೊಂದವರಿಗೆ ಆತ್ಮಸ್ಥೈರ್ಯದ ಮಾತುಗಳನ್ನು ಹೇಳಿ ದು:ಖತಪ್ತರ ಕುಶಲೋಪರಿ ವಿಚಾರಿಸಿದ ಪ್ರಸಂಗ ಇಂದು ಪಟ್ಟಣದಲ್ಲಿ ಜರುಗಿತು.
ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಪಟ್ಟಣದಲ್ಲಿ ಕರೋನಾ 2 ನೇ ಅಲೆಯಲ್ಲಿ ಮೃತಪಟ್ಟ ಸುಮಾರು 30 ಕ್ಕಿಂತ ಅಧಿಕ ಜನರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನದ ನುಡಿಗಳನ್ನು ಹೇಳಿದ ಅವರು ಮಹಾಮಾರಿ ರೋಗ ಇಡಿ ಮನುಕುಲದ ಬದುಕನ್ನು ಅಸ್ಥಿರಗೊಳಿಸಿದ್ದು ಮಾತ್ರವಲ್ಲದೇ ಸಂಬಂಧಗಳನ್ನು ಕೂಡ ಸುಟ್ಟುಹಾಕಿದ ರಕ್ಕಸ, ಜಗತ್ತಿನಾದ್ಯಂತ ಲಕ್ಷಾಂತರ ಜನ ತಂದೆ-ತಾಯಿ, ಮಕ್ಕಳು, ಗಂಡ, ಮಡದಿಯರನ್ನು ಕಳೆದುಕೊಂಡು ಅನಾಥರಾಗಿ ಪರಿತಪಿಸಿದ ಪ್ರಸಂಗವನ್ನು ತಂದೊಡ್ಡಿದ ಪ್ರಳಯಾಂತಕ ಈ ಕರೋನಾ ಪ್ರಾಣವನ್ನು ಮಾತ್ರವಲ್ಲದೆ ಸಂಬಂಧಗಳನ್ನೂ ಕೂಡ ದೂರ ಮಾಡಿ ಅಂತಿಮ ಯಾತ್ರೆಯಲ್ಲಿ ಯಾರೂ ಪಾಲ್ಗೊಳ್ಳದೆ ತಮ್ಮವರ ಶವಸಂಸ್ಕಾರವನ್ನು ತಾವೇ ಮಾಡಿದ ಸಾವಿರಾರು ಉದಾಹರಣೆಗಳು ನಿದರ್ಶನವಾಗಿವೆ. ಮನುಕುಲಕ್ಕೆ ಶಾಪವಾಗಿ ಬಂದಿರುವ ಈ ಮಹಾಮಾರಿಯನ್ನು ಜಾತ್ಯಾತೀತವಾಗಿ ಪ್ರತಿಯೊಬ್ಬರು ಪರಸ್ಪರ ಸಹಾಯ ಮಾಡುವುದರೊಂದಿಗೆ ಮಾನವೀಯತೆಯನ್ನು ಮೆರೆಯಬೇಕೆಂದು ತಿಳಿಸಿದ ಅವರು ನೊಂದವರಿಗೆ ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯವಾಗಿರುವಂತೆ ಮನಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ತೇರದಾಳ ನಗರ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಆಳಗೊಂಡ, ಮುಖಂಡರಾದ ಪ್ರವೀಣ ನಾಡಗೌಡ, ನೇಮಣ್ಣ ಸಾವಂತನವರ, ಪುರಸಭೆ ಸದಸ್ಯರಾದ ಫಜಲ್ ಅತ್ತಾರಾವುತ್, ಫಯಾಜ ಇನಾಂದಾರ, ದಾನಪ್ಪ ಕರೋಲಿ, ಮಾಜಿ ಸದಸ್ಯರಾದ ಪ್ರಭು ಗಸ್ತಿ, ರಾಜೇಸಾಬ ನಗಾರ್ಜಿ, ಕಾಂಗ್ರೆಸ್ ಜಾಲತಾಣದ ಮುಖ್ಯಸ್ಥ ಮೆಹೆಬೂಬ ಜಮಾದಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Social Plugin