ತೇರದಾಳ ಸಮೀಪದ ತಮದಡ್ಡಿ ಗ್ರಾಮಕ್ಕೆ ಕೃಷ್ಣಾ ನದಿ ನೀರು ನುಗ್ಗಿದ ಹಿನ್ನಲೆ ತಮಗಾದ ತೊಂದರೆಯನ್ನು ಸಂತ್ರಸ್ಥರು ತೋಡಿಕೊಳ್ಳುತ್ತಿರುವುದು.
ತೇರದಾಳ : ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದಂತೆ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಬರುತ್ತದೆ. ಇದರಿಂದ ತಮದಡ್ಡಿ ಗ್ರಾಮದಲ್ಲಿ ನೀರು ನುಗ್ಗಿ ಗ್ರಾಮಸ್ಥರಿಗೆ ಬಹಳಷ್ಟು ತೊಂದರೆ ಮಾಡುತ್ತಿದೆ. ಪ್ರತಿ ವರ್ಷ ನಾವು ಕೃಷ್ಣಾ ನದಿ ತುಂಬಿ ಪ್ರವಾಹ ಬಂದಾಗ ಜನ ಜಾನವಾರುಗಳು ಇಲ್ಲಿಂದ ಸ್ಥಳಾಂತರಗೊಂಡು ಕಾಳಜಿ ಕೇಂದ್ರಗಳಿಗೆ ಹೋಗಿ ಆಶ್ರಯ ಪಡೆಯಬೇಕು. ಇದು ಪ್ರತಿ ವರ್ಷ ನಮಗಿರುವ ಸಮಸ್ಯೆ ಎಂದು ಅಲ್ಲಿನ ಸಂತ್ರಸ್ಥರು ತಮ್ಮ ಗೋಳನ್ನು ತಮ್ಮ ಅಳಲನ್ನು ತೋಡಿಕೊಂಡರು.
ಎಸ್‍ಸಿ ಕಾಲನಿಯಲ್ಲಿ ಸುಮಾರು ಹದಿನಾರು ಮನೆಗಳು ಮುಳುಗಡೆಯಾಗಿದ್ದರೂ ಸರಕಾರದಿಂದ ಈ ವರೆಗೆ ಯಾವುದೇ ರೀತಿಯ ಪರಿಹಾರ ಬಂದಿಲ್ಲ. ಪರಿಹಾರ ಕೊಡುವಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಕೇವಲ ಭರವಸೆಯನ್ನು ಕೊಡುತ್ತಾ ಬಂದಿದ್ದಾರೆ. ಪ್ರವಾಹ ಬಂದಾಗ ಶಾಸಕರು, ಅಧಿಕಾರಿಗಳು ಬಂದು ನಮ್ಮ ಸಮಸ್ಯೆಯನ್ನು ಆಲಿಸುತ್ತಾರೆ. ಯಾವುದೇ ರೀತಿಯಾದ ಪರಿಹಾರ ಮಾತ್ರ ನಮಗೆ ಬಂದಿಲ್ಲ. ತಮದಡ್ಡಿ ಗ್ರಾಮ ಸಂಪೂರ್ಣವಾಗಿ ಮುಳುಗಡೆ ಎಂದು ಘೋಷಣೆ ಮಾಡಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಮಾಜಿ ಸಚಿವೆ ಉಮಾಶ್ರೀಯವರು ಹಳಿಂಗಳಿ ಗುಡ್ಡದಲ್ಲಿ 89 ಎಕರೆ ಜಾಗೆಯನ್ನು ಕೊಟ್ಟು ಉತಾರೆಯನ್ನು ಸಹ ಮಾಡಲಾಗಿದೆ. 2019ರಲ್ಲಿ ಪ್ರವಾಹ ಬಂದಾಗ ಸುಮಾರು 200ರಿಂದ 300 ಎಸ್‍ಸಿ ಮನೆಗಳು ಹಾನಿಗೊಳಗಾಗಿದ್ದವು. ಹಾನಿಗೊಳಗಾದ ಮನೆಗಳ ಸರ್ವೆ ಮಾಡಿದ ಅಧಿಕಾರಿಗಳು ತಾರತಮ್ಯ ಮಾಡಿ ಕೇವಲ ಹತ್ತರಿಂದ ಹದಿನೈದು ಮನೆಗಳು ಹಾನಿಗೊಳಗಾಗಿವೆ ಎಂದು ವರದಿ ಕೊಟ್ಟಿದ್ದಾರೆ. ಮಳೆಗೆ ಬೀಳದೇ ಇರುವ ಮನೆಗಳಿಗೆ ಹಾಗೂ ಉತಾರ ಇಲ್ಲದೇ ಇರುವ ಮನೆಗಳಿಗೆ 5ಲಕ್ಷ. ರೂ. ಪರಿಹಾರವನ್ನು ಕೊಟ್ಟರು. ಈ ಹಿಂದಿನ ತಹಶೀಲ್ದಾರರಿಗೆ ಮನವಿಯನ್ನು ಕೊಟ್ಟು ಮನವರಿಕೆ ಮಾಡಿದ್ದರೂ ಅವರು ತನಿಖೆ ಮಾಡದೇ ಅಧಿಕಾರಿಗಳು ಕೊಟ್ಟಿರುವ ವರದಿ ಪ್ರಕಾರ ಪರಿಹಾರವನ್ನು ಕೊಟ್ಟರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಧು ಕಾಂಬಳೆ, ಮಹಾದೇವ ಯಲ್ಲಡಗಿ, ಸುಸಿಲಾ ಯಲ್ಲಡಗಿ, ಸಂಗೀತಾ ಯಲ್ಲಡಗಿ, ಬಸಪ್ಪ ಯಲ್ಲಡಗಿ, ರಾಜು ಕಾಂಬಳೆ, ಸುಭಾಸ ಶಿಂಗಿ ಸೇರಿದಂತೆ ಹಲವಾರು ಸಂತ್ರಸ್ಥರು ಇದ್ದರು.
Social Plugin