ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಶಾಸಕ ಸಿದ್ದು ಸವದಿ ಭೇಟಿ ನೀಡಿದರು.
ತಾಲೂಕಿನಾದ್ಯಂತ ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ಕೊಟ್ಟ ಶಾಸಕ ಸಿದ್ದು ಸವದಿ
ತೇರದಾಳ: ಕೃಷ್ಣಾ ನದಿ ತೀರದ ಗ್ರಾಮಗಳಾದ ಹಳಿಂಗಳಿ,ತಮದಡ್ಡಿ,ಮದನಮಟ್ಟಿ,ಅಸ್ಕಿ,ಆಸಂಗಿ ಹಾಗೂ ಘಟಪ್ರಭಾ ನದಿ ತೀರ ಗ್ರಾಮಗಳಾದ ಮಾರಾಪೂರ ಗ್ರಾಮಗಳು ಭಾಗಶ: ಜಲಾವ್ರತಗೊಂಡಿದ್ದು ನೆರೆ ಸಂತ್ರಸ್ಥರಿಗಾಗಿ ಸರಕಾರದಿಂದ ಪ್ರತಿ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಿದ್ದು ಹೊಲ ಗದ್ದೆಗಳಲ್ಲಿ ವಾಸವಾಗಿರುವ ಜನರು ಪ್ರವಾಹವನ್ನು ನಿರ್ಲಕ್ಷಿಸದೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ತಮ್ಮ ಜಾನುವಾರುಗಳೊಂದಿಗೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರವಾಗಬೇಕೆಂದು ತೇರದಾಳ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.
ಮತಕ್ಷೇತ್ರದ ಹಳಿಂಗಳಿ,ತಮದಡ್ಡಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಅವರು ನಮ್ಮ ಜಿಲ್ಲಾ ಹಾಗೂ ತಾಲೂಕಾ ಆಡಳಿತ ಈಗಾಗಲೇ ಪ್ರವಾಹ ಸಂತ್ರಸ್ತರಿಗಾಗಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು ಈಗಾಗಲೇ ಪ್ರತಿ ಗ್ರಾಮಗಳಲ್ಲಿ 20 ರಿಂದ 30 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಿದ್ದು ಇನ್ನುಳಿದ ಜನರನ್ನು ತಮ್ಮ ಜಾನುವಾರಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸವನ್ನು ಅಧಿಕಾರಿಗಳ ತಂಡ ಮಾಡುತ್ತಿದ್ದು ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಅಗತ್ಯ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಮೇವಿನ ವ್ಯವಸ್ಥೆಯನ್ನು ಮಾಡಲಾಗುವುದೆಂದು ತಿಳಿಸಿದ ಅವರು ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದ್ದು ನೀರಿನ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದ್ದು ನಾಳೆಯ ಒಳಗಾಗಿ ಪ್ರವಾಹದ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದ್ದು ಜನರು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲವೆಂದು ತಿಳಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೋಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಗ್ರಾಮದ ಮುಖಂಡರು ಇದ್ದರು.
Social Plugin