ಹುಕ್ಕೇರಿ ತಾಲೂಕಿನ ಪಾಶ್ಚಾಪುರದಲ್ಲಿ ಶೀಘ್ರವೇ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಕ್ಷೇತ್ರದ ಜನರ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದ್ದು ಮಾದರಿ ಕ್ಷೇತ್ರವನ್ನಾಗಿ ರೂಪಿಸಲಾಗುವುದು.
- ಸತೀಶ ಜಾರಕಿಹೊಳಿ, ಶಾಸಕರು
5 ಕೋಟಿ ರೂ. ವೆಚ್ಚದಲ್ಲಿ ಶೀಘ್ರ ನಿರ್ಮಾಣ ಕಾರ್ಯ ಆರಂಭ; ನೂತನ ಕಟ್ಟಡದಲ್ಲಿ 2 ಹೈಟೆಕ್ ವಿಐಪಿ ಕೊಠಡಿಗಳು, 4 ರೂಮ್‍ಗಳನ್ನು ನಿರ್ಮಿಸಲು ಯೋಜನೆ
ಹುಕ್ಕೇರಿ: ತಾಲೂಕಿನ ಯಮಕನಮರಡಿ ವಿಧಾನಸಭೆ ಕ್ಷೇತ್ರ ಹೊಸದಾಗಿ ಸೃಷ್ಟಿಯಾದ ದಿನಗಳಿಂದ ಪ್ರವಾಸಿಗರು ಹಾಗೂ ಕ್ಷೇತ್ರ ಜನರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಿಂದ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸಿಗರು ತಂಗಲು ಅಗತ್ಯ ಸ್ಥಳಾವಕಾಶ ಕೊರತೆ ಇನ್ನು ಮುಂದೆ ನಿವಾರಣೆಯಾಗಲಿದೆ.
ಕ್ಷೇತ್ರ ವ್ಯಾಪ್ತಿಯ ಜನರು ಹಾಗೂ ರೈಲ್ವೆ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಹುಕ್ಕೇರಿ ತಾಲೂಕಿನ ಪಾಶ್ವಾಪುರದಲ್ಲಿ ಶೀಘ್ರವೇ ಹೈಟೆಕ್ ಪ್ರವಾಸಿ ಮಂದಿರ ತಲೆಎತ್ತಲಿದೆ. ಇದಕ್ಕಾಗಿ ಸುಮಾರು 5 ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದು, ಮುಂಬರುವ ದಿನಗಳಲ್ಲಿ ಈ ಪ್ರದೇಶ ಪ್ರವಾಸಿಗರ ತಾಣವಾಗಿ ಮಾರ್ಪಡಲಿದೆ. ಜತೆಗೆ ಹುಕ್ಕೇರಿ, ಗೋಕಾಕ ಮತ್ತು ಬೆಳಗಾವಿ ಜನತೆಗೂ ನೂತನ ಪ್ರವಾಸಿ ಮಂದಿರ ಅನುಕೂಲವಾಗಲಿದೆ.
ಮೂರು ತಾಲೂಕುಗಳನ್ನು ಸಂಪರ್ಕಿಸುವ ಆಯಕಟ್ಟಿನ ಸ್ಥಳವಾಗಿರುವ ಪಾಶ್ಚಾಪುರದಲ್ಲಿ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣದಿಂದ ಈ ಭಾಗದ ವಾಣಿಜ್ಯ ಚಟುವಟಿಕೆಗಳಿಗೂ ಮತ್ತಷ್ಟು ಉತ್ತೇಜನ ಸಿಗುವ ಮೂಲಕ ಆರ್ಥಿಕ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರ ಮುತುರ್ವಜಿಯಿಂದ ನೂತನ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣ ಕಾರ್ಯ ಶೀಘ್ರವೇ ನೆರವೇರಲಿದೆ.
5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ:
ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಅಡಿಯಲ್ಲಿ 2021-22 ನೇ ಸಾಲಿನಲ್ಲಿ ಸುಮಾರು 5 ಕೋಟಿ ಮಂಜೂರಾಗಿದೆ. ಈ ಅನುದಾನದಲ್ಲಿ ಎರಡು ಅಂತಸ್ಥಿನ ವಿಶಾಲವಾದ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನೂತನ ಕಟ್ಟಡದಲ್ಲಿ 2 ಹೈಟೆಕ್ ವಿಐಪಿ ಕೊಠಡಿಗಳು, 4 ರೂಮ್‍ಗಳನ್ನು ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ.

Social Plugin