*ಸಾವಿರಕ್ಕೂ ಅಧಿಕ ಹಾವು ಹಿಡಿದ `ಮಹಾದೇವ’*

ಕಲ್ಲು ನಾಗರ ಕಂಡರೆ ಹಾಲೆರೆಯುವ ಮಂದಿ ದಿಟ ನಾಗರ ಕಂಡರೆ ಬಡಿಗೆಯಲ್ಲಿ ಬಡಿಯುವ ಮಂದಿಯೇ ಹೆಚ್ಚಾಗಿದ್ದಾರೆ. 

ಈ ನಡುವೆ ಉರಗಗಳ ರಕ್ಷಣೆಗೆ ಹಲವಾರು ಮಂದಿ ಉರಗ ಪ್ರಿಯರಿದ್ದಾರೆ. ವಿಷಕಾರಿಯಾದ ಹಲವಾರು ಬಗೆ ಸಾವಿರಕ್ಕೂ ಅಧಿಕ ಹಾವುಗಳನ್ನು ಜಾಗರೂಕತೆಯಿಂದ ಹಿಡಿದು ಕಾಡುಪ್ರದೇಶಗಳಿಗೆ ಬಿಟ್ಟು ಬರುವ ಅನೇಕ ಮಂದಿ ಇದ್ದಾರೆ.

ಅನೇಕ ಉರಗ ಪ್ರಿಯರ ಮಧ್ಯೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ತೋಟದ ವಸತಿಯಲ್ಲಿ ಪ್ರಗತಿಪರ ರೈತನಾದ ಮಹಾದೇವ ನಾಗಪ್ಪ ಪಾಟೀಲ(ಸಿದಕಾಡಿ) ಎದ್ದು ಕಾಣುತ್ತಾರೆ.
ಉರಗಗಳನ್ನು ರಕ್ಷಣೆ ಕಾರ್ಯವನ್ನು ಅವರು ಶೃದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಚಿಕ್ಕನಿಂದನಲೇ ಹಾವುಗಳ ಬಗ್ಗೆ ವಿಶೇಷ ಆಸಕ್ತಿಯಿದ್ದ ಮಹಾದೇವ ಟೆಲಿವಿಷನ್‌ಗಳಲ್ಲಿ ಬರುತ್ತಿದ್ದ ಹಾವುಗಳನ್ನು ವೀಕ್ಷಿಸಿ ಹಾವುಗಳನ್ನು ಹಿಡಿಯಬೇಕೆಂಬ ಕನಸು ಕಾಣುತ್ತಿದ್ದರು. ಈ ನಡುವೆ ಮಾರ್ಗದರ್ಶಕರೊಬ್ಬರ ಗೆಳೆತನ ಬೆಳೆಸಿಕೊಂಡ ಮಹಾದೇವ ಹಾವುಗಳನ್ನು ರಕ್ಷಣಾತ್ಮಕವಾಗಿ ಹಿಡಿಯುವದನ್ನು ರೂಢಿ ಮಾಡಿಕೊಂಡರು.

ನಂತರ ರಬಕವಿ-ಬನಹಟ್ಟಿ ತಾಲೂಕಿನ ಸುತ್ತಮುತ್ತ ಪ್ರದೇಶಗಳಲ್ಲಿ ವಿವಿಧ ಬಗೆಯ ಹಲವಾರು ವಿಷಪೂರಿತ ಹಾವುಗಳನ್ನು ಹಿಡಿದು ರಕ್ಷಿಸಿ ಮನೆಯ ಮಾಲೀಕರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಉರಗಗಳಿಗೆ ಯಾವದೇ ರೀತಿಯ ತೊಂದರೆಯಾಗದಂತೆ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಉರಗ ಸಂತತಿಯನ್ನು ರಕ್ಷಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಮಹಾದೇವ ಮೂಲತಃ ಕೃಷಿಕರಾಗಿದ್ದು ಈ ಭಾಗದಲ್ಲಿ ಯಾವದೇ ರೀತಿಯ ಹಾವುಗಳನ್ನು ಕಂಡರೆ ತಕ್ಷಣ ಮಹಾದೇವರ ಫೋನ್ ರಿಂಗಣಿಸುತ್ತದೆ. ಸ್ಥಳಕ್ಕೆ ತೆರಳಿ ಮನೆ ಮಂದಿಗೆಲ್ಲ ಸಮಾಧಾನವೇಳಿ ಹಾವುಗಳ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿ ನಂತರ ಮನೆಯಲ್ಲಿ ಸೇರಿಕೊಂಡಿರುವ `ನಾಗ’ರಾಜನನ್ನು ಸೆರೆಹಿಡಿದು ಮನೆಮಂದಿಗೆಲ್ಲ ನೆಮ್ಮದಿ ನೀಡುತ್ತಿದ್ದಾರೆ. ಯಾವದೇ ಪ್ರತಿಫಲಾಪೇಕ್ಷೆಯಿಲ್ಲದೆ ಉರಗಗಳ ರಕ್ಷಣೆಯಲ್ಲಿ ತೊಡಗಿರುವ ಮಹಾದೇವ ಹಾವುಗಳ ಬಗ್ಗೆ ಅರಿವು ಮೂಡಿಸವು ಪ್ರಯತ್ನ ಮಾಡುತ್ತಿದ್ದಾರೆ.

ಸಿದಕಾಡಿ(ಪಾಟೀಲ) ಕುಟುಂಬದ ಸದಸ್ಯರಾರೂ ಹಾವು ಹಿಡಿಯುವ ಸಾಹಸ ಇಲ್ಲಿಯವರೆಗೂ ಮಾಡಿಲ್ಲ. ಆದರೆ ಮಹಾದೇವ ಮಾತ್ರ ಕಳೆದ ೧೦ ವರ್ಷಗಳಿಂದ ಸುಮಾರು ೫ ಸಾವಿರಕ್ಕೂ ಅಧಿಕ ಅರಿ ವಿಷಕಾರಿಯಾದ ಎಳೆ ನಾಗರ, ನಾಗರ ಹಾವು, ಹಸಿರಾವು ಮುಂತಾದ ಬಗೆಯ ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ. ಹಾವು ಹಿಡಿಯುವ ಮೊದಲು ಕಚ್ಚಿದರೂ ನಂಜು ಸೇರಬಾರದೆಂಬ ಉದ್ದೇಶದಿಂದ ಪೂರ್ವನಿಯೋಜಿತವಾಗಿ ಔಷಧಿ ಸೇವಿಸಿಯೇ ಬರುತ್ತಾರೆ. 


ಹಾವುಗಳಿಗೆ ತೊಂದರೆ ಕೊಡದೆ ರಕ್ಷಣೆ ಮಾಡಬೇಕೆನ್ನುವದು ಮಹಾದೇವರ ಒಲವು-ನಿಲುವು. ನಿಮ್ಮ ಮನೆ ಅಥವಾ ಸುತ್ತಲಿನ ಪ್ರದೇಶದಲ್ಲಿಯಾವದೇ ಹಾವುಗಳು ಕಂಡರೂ ತಕ್ಷಣ ಮೊಬೈಲ್ ಸಂಖ್ಯೆ:೭೬೭೬೫-೫೦೬೩೪ ಗೆ ಕರೆ ಮಾಡಬಹುದು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ