ಬೆಳಗಾವಿ (ಜುಲೈ, 17): ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕ ನಿರ್ಲಕ್ಷಿಸುತ್ತಿದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಕಿಡಿಕಾರಿದೆ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಿ, ಇಲ್ಲವಾದ್ರೆ ಪ್ರತ್ಯೇಕ ರಾಜ್ಯದ ಕೂಗಿಗೆ ರಾಜಕೀಯ ಸ್ವರೂಪ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೇ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ರದ್ದತಿ ಬಗ್ಗೆ ಸಹ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧ ನಿರ್ಮಿಸಲಾಗಿದೆ. ಈ ಶಕ್ತಿ ಕೇಂದ್ರದಲ್ಲಿ ಕಾಟಾಚಾರಕ್ಕೆ ಅಧಿವೇಶನಗಳು ನಡೆದಿವೆ ಹೊರತು ಉತ್ತರ ಕರ್ನಾಟಕ ಜನತೆಯ ಆಶೋತ್ತರಗಳು ಈಡೇರಿಸುವ ಕಾರ್ಯ ಈವರೆಗೂ ಆಗಿಲ್ಲ.
ಈಗ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಕಳೆದ ಮೂರು ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಹೀಗಾಗಿ ಸರ್ಕಾರ ಇದೇ ಜುಲೈ 30 ಒಳಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮತ್ತೆ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಕೂಗು ತೀವ್ರಗೊಳ್ಳಲಿದೆ. ಆಗಷ್ಟ್ ತಿಂಗಳಿನಿಂದಲೇ ರಾಜಕೀಯ ಸ್ವರೂಪದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅಶೋಕ ಪೂಜಾರಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಸಿಎಂ ಅವರನ್ನ ಆಗ್ರಹಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಹಿಂದೇಟು ಹಾಕುತ್ತಿದೆ. ಉತ್ತರ ಕರ್ನಾಟಕದ ಶಾಸಕರು, ಸಚಿವರು ಸಹ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ.
ಈ ಹಿಂದೆ ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಆಡಳಿತಾತ್ಮಕ ಕಚೇರಿ ಸ್ಥಳಾಂತರಿಸುವಂತೆ ಮಠಾಧೀಶರ ನೇತೃತ್ವದ ಹೋರಾಟ ನಡೆದಿತ್ತು. ಆಗ ವಿಪಕ್ಷದಲ್ಲಿದ್ದ ಸಿಎಂ ಯಡಿಯೂರಪ್ಪನವರೇ ಶ್ರೀಗಳ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ ನಡೆಸಿದ್ರು. ಜೊತೆಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ 15 ದಿನಗಳಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ರು. ಈಗ ಅವರೇ ಸಿಎಂ ಆಗಿದ್ದಾರೆ ಆದ್ರು ಕಚೇರಿ ಬಂದಿಲ್ಲವೆಂದು ಗದಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ದರಾಮ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರತ್ಯೇಕ ರಾಜ್ಯದ ಕೂಗಿಗೆ ಶ್ರೀಗಳು ವಿರೋಧಿಸಿದ್ದು, ಪ್ರತ್ಯೇಕತೆ ಕೂಗು ಅರ್ಥಹೀನ ಎಂದು ಕಿವಿಮಾತು ಹೇಳಿದ್ದಾರೆ.
ಉತ್ತರ ಕರ್ನಾಟಕ ಶಕ್ತಿ ಕೇಂದ್ರವಾದ ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನ ನಡೆಸಲು ಸರ್ಕಾರ ಮೀನಾಮೇಷ ಏನಿಸುತ್ತಿದೆ. ಸದ್ಯ ಸರ್ಕಾರ ಅಧಿವೇಶನ ನಡೆಸದಿದ್ದರೆ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ತೀವ್ರಗೊಳ್ಳಲಿದೆ. ಇನ್ನಾದ್ರು ಸರ್ಕಾರ ಎಚ್ಚೆತ್ತುಕೊಂಡು ಉತ್ತರದ ಜನತೆಯ ಭಾವನೆಗಳಿಗೆ ಸ್ಪಂದಿಸಬೇಕಿದೆ.

Social Plugin