*೨೦೧೮ ರ ಕಬ್ಬಿನ ಬಿಲ್ ಪಾವತಿಸುವಂತೆ ಆಗ್ರಹಿಸಿ ಮನವಿ*
 ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಈ ಭಾಗದ ರೈತರು ೨೦೧೮ರಲ್ಲಿ ಕಬ್ಬು ಪೂರೈಕೆ ಮಾಡಿದ್ದರು. ಆದರೆ ಸಕ್ಕರೆ ಕಾರ್ಖಾನೆಗೆ ಬಂದಾಗಿದ್ದು, ಇದುವರೆಗೂ ರೈತರಿಗೆ ಬರಬೇಕಾದ ಕಬ್ಬಿನ ಬಿಲ್ ಪಾವತಿಯಾಗಿಲ್ಲ. ಈ ಕುರಿತು ರೈತರು ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಮತ್ತು ಮುಖ್ಯಮಂತ್ರಿಗಳಿಗೆ, ಸ್ಥಳೀಯ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಗೆ ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸಿದರು ಯಾವುದೆ ಪ್ರಯೋಜನವಾಗಿಲ್ಲ. ಕೋವಿಡ್-೧೯ ಲಾಕ್ ಡೌನ್ ದಿಂದಾಗಿ  ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಬ್ಬಿನ ಬಿಲ್ ಪಾವತಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡ ಗಂಗಾಧರ ಮೇಟಿ ಆಗ್ರಹಿಸಿದರು. ಅವರು ಸೋಮವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕಬ್ಬಿನ ಬಿಲ್ ಪಾವತಿಸುವಂತೆ ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಈಗಾಗಲೇ ಮುಖ್ಯಮಂತ್ರಿಗಳು ಅಪೆಕ್ಸ್ ಬ್ಯಾಂಕ್ ಮೂಲಕ ಕಬ್ಬಿನ ಬಿಲ್ ಪಾವತಿಸುವಂತೆ ಆದೇಶ ಮಾಡಿದ್ದರು. ಸ್ಥಳೀಯ ಶಾಸಕರು, ಬಾಗಲಕೋಟೆ ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕರಾಗಿರುವ ಸಿದ್ದು ಸವದಿಯವರು ಈಗ ಅಪೆಕ್ಸ್ ಬ್ಯಾಂಕ್ ನ ಸದಸ್ಯರಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಈ ಭಾಗದ ರೈತರ ಕಬ್ಬಿನ ಬಿಲ್ ಪಾವತಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಶಾಸಕ ಸಿದ್ದು ಸವದಿಯವರ ಹಿತಾಸಕ್ತಿ ಮುಖ್ಯವಾಗಿದೆ ಎಂದು ಗಂಗಾಧರ ಮೇಟಿ ತಿಳಿಸಿದರು. ರೈತ ಮುಖಂಡ ಹೊನ್ನಪ್ಪ ಬಿರಡಿ ಮಾತನಾಡಿ, ಸಾವರಿನ್ ಸಕ್ಕರೆ ಕಾರ್ಖಾನೆಗೆ ೧೫೦೦ ಜನ ರೈತರು ಕಬ್ಬು ಪೂರೈಸಿದ್ದಾರೆ. ಅಂದಾಜು ರೂ. ೨೧ ಕೋಟಿಯಷ್ಟು ಬಾಕಿ ಹಣ ಬರಬೇಕಾಗಿದೆ. ಮೂರು ವರ್ಷಗಳಿಂದ ರೈತರ ಕಬ್ಬಿನ ಬಿಲ್ ಪಾವತಿಯಾಗದೆ ರೈತರಿಗೆ ಬಹಳಷ್ಟು ಅನ್ಯಾಯವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಪೆಕ್ಸ್ ಬ್ಯಾಂಕ್ ಅಧಿಕಾರಿಗಳು, ಸಕ್ಕರೆ ಕಾರ್ಖಾನೆಯ ಮಾಲೀಕರ ಮತ್ತು ರೈತರ ಸಭೆ ಕರೆದು ಹಣ ಪಾವತಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು ಬಾಗಲಕೋಟೆ