*ಕಾಲೇಜು ಅವರಣದ ಸುತ್ತ ಮುತ್ತ ಗಿಡ ಮರಗಳನ್ನು ಬೆಳಸಿ*
ಶಾಲಾ ಕಾಲೇಜು ಆವರಣಗಳಲ್ಲಿ ಗಿಡ ಮರಗಳನ್ನು ಹಚ್ಚುವುದರಿಂದ ಪರಿಶುದ್ಧವಾದ ಪರಿಸರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಕಾಲೇಜು ಆವರಣದಲ್ಲಿ ಸಸಿಗಳನ್ನು ಬೆಳೆಸುವುದರ ಜೊತೆಗೆ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಸ್ಥಳೀಯ ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ ತಿಳಿಸಿದರು.

ಬಾಗಲಕೋಟೆ ನೂತನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವನಮಹೋತ್ಸವದ ನಿಮಿತ್ತವಾಗಿ ಸಸಿ ನೆಟ್ಟು ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಾಚಾರ್ಯೆ ಚಂದ್ರಪ್ರಭಾ ಬಾಗಲಕೋಟ ಮಾತನಾಡಿ, ಬರುವ ಶೈಕ್ಷಣಿಕ ವರ್ಷದಿಂದ ನೂತನ ಕಾಲೇಜಿನಲ್ಲಿಯೇ ಕಾರ್ಯವನ್ನು ಆರಂಭಿಸಲಾಗುವುದು. ಮೂಲ ಸೌಲಭ್ಯಗಳ ಕೊರತೆ ಇದ್ದು, ಅವುಗಳನ್ನು ಇಲ್ಲಿ ಸ್ಥಳಾಂತರಗೊಂಡ ನಂತರ ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು. ನೂತನ ಕಾಲೇಜಿನಲ್ಲಿ ಸಾಕಷ್ಟು ಕೋಣೆಗಳು ಇದ್ದು, ಡೆಸ್ಕ್, ಆಟದ ಮೈದಾನ, ಗ್ರಂಥಾಲಯ ಹಾಗೂ ಪ್ರಯೋಗಾಲಯ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕಾಲೇಜು ಆವರಣ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಸಹಾಯದಿಂದಗಿಡ ಮರಗಳನ್ನು ಬೆಳೆಸಲಾಗುವುದು ಎಂದು ಪ್ರಾಚಾರ್ಯೆ ಬಾಗಲಕೋಟ ತಿಳಿಸಿದರು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ