------------------------------------------------------
ಮೇಲುಕೋಟೆ : ಆಷಾಡಮಾಸದ ಜಾತ್ರಾಮಹೋತ್ಸವದ ಅಂಗವಾಗಿ ಜುಲೈ 29ರಂದು ರಾತ್ರಿ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಶ್ರೀಕೃಷ್ಣರಾಜಮುಡಿ ಉತ್ಸವ ನೆರವೇರಲಿದೆ .
ಜುಲೈ24 ರ ಅಂಕುರಾರ್ಪಣೆಯೊಂದಿಗೆ ಆರಂಭವಾಗಲಿರುವ ಹತ್ತುದಿನಗಳ ಆಷಾಡಜಾತ್ರಾಮಹೋತ್ಸವ ಆಗಸ್ಟ್ 4 ರ ಪುಷ್ಪಯಾಗದವರೆಗೆ ಹತ್ತುದಿನಗಳಕಾಲ ನೆರವೇರಲಿದೆ. ಕೊರೋನ ನಿರ್ಭಂಧದ ಕಾರಣ ಎಲ್ಲಾ ಉತ್ಸವಗಳೂ ಸಹ ದೇವಾಲಯದ ಒಳಭಾಗಕ್ಕೆ ಸೀಮಿತವಾಗಿ ನಡೆಯಲಿದೆ
ಹೆಚ್ಚುಭಕ್ತರು ಮೇಲುಕೋಟೆಗೆ ಬರುವ ಜುಲೈ 25ರ ಭಾನುವಾರ ನಡೆಯುವ ಮಹಾರಾಜರ ಜನ್ಮವರ್ಧಂತಿ ಹಾಗೂ ಮಹಾಭಿಷೇಕ, ಕಲ್ಯಾಣೋತ್ಸವ ದಿನ ಜಿಲ್ಲಾಧಿಕಾರಿಗಳ ಆದೇಶದಂತೆ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಭಂದಿಸಲಾಗಿದೆ
ಆಷಾಡಜಾತ್ರಾಮಹೋತ್ಸವದಲ್ಲಿ ಪ್ರಮುಖದಿನವಾದ ಜುಲೈ 29 ರಂದು ರಾತ್ರಿ ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನೆರವೇರಲಿದೆ. ಇದಕ್ಕೂ ಪೂರ್ವಭಾವಿಯಾಗಿ ಜುಲೈ 25 ಭಾನುವಾರ ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ಅಂಗವಾಗಿ ಮಹಾಭಿಷೇಕ ಕಲ್ಯಾಣೋತ್ಸವ ನೆರವೇರಲಿದೆ
ಕೋವಿಡ್ 19ನ ಎಲ್ಲಾ ಮುನ್ನೆಚ್ಚರಿಕೆ ವಹಿಸಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಉತ್ಸವವನ್ನು ಸಾಂಕೇತಿಕವಾಗಿ ದೇವಾಲಯದ ಒಳಪ್ರಾಕಾರದಲ್ಲಿ ನಡೆಸಲಾಗುತ್ತಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ತಿಳಿಸಿದ್ದಾರೆ.
ಬ್ರಹ್ಮೋತ್ಸವದಲ್ಲಿ ಜುಲೈ 24 ರಂದು ಅಂಕುರಾರ್ಪಣೆ ಜುಲೈ 25ರಂದು ಮಹಾಭಿಷೇಕ ಕಲ್ಯಾಣೋತ್ಸವ 26 ರಂದು ಒಂದನೇ ತಿರುನಾಳ್ ಅಂಗವಾಗಿ ಬೆಳಿಗ್ಗೆ ಗರುಡದ್ವಜಾರೋಹಣ ನೆರವೇರಿಸಿ ದೇವಾನು ದೇವತೆಗಳನ್ನು ಗರುಡದೇವನ ಮೂಲಕ ಬ್ರಹ್ಮೋತ್ಸವಕ್ಕೆ ಆಹ್ವಾನಿಸುವ ದ್ವಜಾರೋಹಣ ಸಂಜೆ ಭೇರಿತಾಡನ ತಿರುಪ್ಪೊರೈ, ಯಾಗಶಾಲಾ ಪ್ರವೇಶ, ಜುಲೈ 27 ಶೇಷವಾಹನೋತ್ಸವ ಜುಲೈ 28 ನಾಗವಲ್ಲೀಮಹೋತ್ಸವ ನರಂದಾಳಿಕಾರೋಹಣ, 29 ರಂದು ಕೃಷ್ಣರಾಜಮುಡಿ ಕಿರೀಟಧಾರಣೆ, 30 ರಂದು ಪ್ರಹ್ಲಾದಪರಿಪಾಲನ, 31 ರಂದು ಗಜೇಂದ್ರಮೋಕ್ಷ ಆಗಸ್ಟ್ 1 ರಂದು ರಥೋತ್ಸವ ಆ.2 ರಂದು ತೆಪ್ಪೋತ್ಸವ ಆ.3 ತೀರ್ಥಸ್ನಾನ ಪಟ್ಟಾಭಿಷೇಕ ಆ.4 ರಂದು ಪುಷ್ಪಯಾಗ ಕಾರ್ಯಕ್ರಮಗಳು ನಡೆಯಲಿವೆ.
------------------------------

Social Plugin