- - - - - - --
ಅಮೆರಿಕ ಮೂಲದ ಈ “ಕ್ಲಬ್ ಹೌಸ್” ಆಪ್ಲಿಕೇಶನ್ ಬಗ್ಗೆ ಫೇಸ್ ಬುಕ್ಕಲ್ಲಿ ಚರ್ಚೆ ಅಂದ್ರೆ ಪಕ್ಕದ ಮನೆಗೆ/ಫ್ಲ್ಯಾಟಿಗೆ ಹೊಸ ಒಕ್ಕಲು ಬಂದಾಗ ಈಗಾಗಲೇ ಅಲ್ಲಿರುವ ಮನೆಗಳವರ ಗಾಸಿಪ್ ರೀತಿಯಲ್ಲಿ ಫೇಸ್ ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ನಡೀತಿದೆ.
ಎರಡು ದಿನಗಳಿಂದ ಆಪ್ಲಿಕೇಷನ್‌ನ ಸಾಧ್ಯತೆಗಳ ಬಗ್ಗೆ ಕಣ್ಣಾಡಿಸಿ ಬಂದಾಗ ನಂಗಿದ್ಯಾಕೋ ಸ್ವಲ್ಪ “ಲೂಸ್ ಕ್ಯಾನನ್” ಅನ್ನಿಸಿತಪ್ಪ. ವೆಬ್ ಜಗತ್ತಿನಲ್ಲಿ ನಿರ್ದಿಷ್ಟ ಗ್ರಾಹಕ ಗುರಿ ಇಲ್ಲದಿದ್ದರೆ ಬದುಕೋದು ಕಷ್ಟ. ಇದಕ್ಕೊಂದು ಚರಿತ್ರೆ ಕೂಡ ಇದೆ. 95-99ರ ಹೊತ್ತಿಗೆ ವೆಬ್‌ಜಗತ್ತಿನಲ್ಲಿ ಬುಲೆಟಿನ್ ಬೋರ್ಡ್‌ಗಳೆಂದು ಕರೆಸಿಕೊಳ್ಳುವ ವೆಬ್ ಚಾಟ್ ಫ್ಲಾಟ್‌ಫಾರಂಗಳಿದ್ದವು. ಅವು ಬೆಳೆದು ಪಬ್ಲಿಕ್ ಚಾಟ್ ಫ್ಲಾಟ್‌ಫಾರಂಗಳಾಗಿ ಒಂದು ಹಂತದಲ್ಲಿ ಪ್ರಸಿದ್ಧವಾಗಿದ್ದವು. ಅವು ಕ್ರಮೇಣ ಇಲ್ಲದಾಗಲು ಮುಖ್ಯ ಕಾರಣ, ಅವುಗಳಲ್ಲಿರುವ ಮಾತನಾಡಲೇ ಬೇಕಾದ ಕಂಪಲ್ಷನ್. ಸೋಷಿಯಲ್ ಮೀಡಿಯಾ ಹೆಸರಲ್ಲಿ ಮೈಕ್ರೊ ಬ್ಲಾಗಿಂಗ್ ಆರಂಭ ಆದ ಬಳಿಕ ಈ ಕಂಪಲ್ಷನ್ ನಿವಾರಣೆ ಆಯ್ತು ಮತ್ತು ಪಬ್ಲಿಕ್ ಚಾಟ್‌ಗಳು ಚರಿತ್ರೆಗೆ ಸಲ್ಲತೊಡಗಿದವು. ಕಡೆಗೂ ಮಾತಾಡಿ ಅಂತ ಯಾರೋ ಅಂದ್ರೆ ಆ ಕ್ಷಣಕ್ಕೆ ಮಾತಾಡೋಕೆ ಏನಿರತ್ತೆ? ಅಥವಾ ಯಾಕಾದರೂ ಇರಬೇಕು?!
ಇಂತಹ ಚಾಟ್ ಫ್ಲಾಟ್‌ಫಾರಂಗಳ ಧ್ವನಿ ರೂಪ ಈ ಕ್ಲಬ್‌ಹೌಸ್ ಅನ್ನಿಸಿತು.
ಅದಲ್ಲದೆ, ಭಾರತದೊಳಗಿನ ಸೋಷಿಯಲ್ ಮೀಡಿಯಾ ಬಳಕೆಯ ಪ್ಯಾಟರ್ನ್ ಕಂಡರೆ “ಕ್ಲಬ್ ಹೌಸಿನಲ್ಲೇ ಹೋಗಿ ಮಾಡುವುದಕ್ಕೆ ಎಕ್ಸ್‌ಕ್ಲೂಸಿವ್ ಆಗಿ ಏನಿದೆ? ಫೇಸ್ ಬುಕ್ಕಿನಲ್ಲೂ ರೂಂ ಇದೆ; ಪ್ರೈವೇಟ್ ಮೆಸೆಂಜರ್ ಇದೆ, ಅಲ್ಲಿ ಗ್ರೂಪ್ ಮಾಡಿಕೊಳ್ಳುವ ಸವಲತ್ತೂ ಇದೆ.
ಕ್ಲಬ್‌ಹೌಸಿನಲ್ಲಿ ಮಿತಿಗಳು ಹಲವಿವೆ. ಅಲ್ಲಿ ಪಾಲ್ಗೊಂಡ ಎಲ್ಲರ ಅನುಮತಿ ಇಲ್ಲದೆ ಆಗುತ್ತಿರುವ ಚರ್ಚೆಯನ್ನು ರೆಕಾರ್ಡ್ ಮಾಡಿಕೊಳ್ಳುವಂತಿಲ್ಲ; “ಆಫ್ ದ ರೆಕಾರ್ಡ್ ಎಂದು ನಿರ್ದಿಷ್ಟವಾಗಿ ಹೇಳಿ, ಏನೇ ಮಾತಾಡಿದರೂ ಅದನ್ನು ಅಲ್ಲಿ ಇಲ್ಲಿ ಹಂಚಿಕೊಳ್ಳುವಂತಿಲ್ಲ (ಮೊನ್ನೆ ದಿಗ್ವಿಜಯ್ ಸಿಂಗ್ ಇದನ್ನು ಓದಿಕೊಂಡಿದ್ದರೆ ವಿವಾದ ತಪ್ಪಿಸಿಕೊಳ್ಳುತ್ತಿದ್ದರು!) ಹಾಗಾಗಿ ಗಾಳಿಯಲ್ಲಿ ಕರಗಿಹೋಗುವ ಚರ್ಚೆಗೆ ಇರುವಷ್ಟೇ ಬೆಲೆ ಇಲ್ಲಿನ ಚರ್ಚೆಗಳಿಗೆ ಉಳಿಯುವುದು. ಹೆಚ್ಚೆಂದರೆ, ಯಾವುದಾದರೂ ದೊಡ್ಡ ಮೀನು ಈ ಆಪ್ಲಿಕೇಷನ್ನಿನ ಯಶಸ್ವೀ ಭಾಗವೇನಾದರೂ ಇದ್ದರೆ ಅದನ್ನು ನುಂಗಿಕೊಂಡು ಹೋಗಬಹುದು ಅನ್ನಿಸುತ್ತದೆ.
ಅವರ ಪಾಲಿಸಿ ಪುಟಗಳನ್ನು ಗಮನಿಸಿದರೆ, ಕೆಲವು ಸಮಯದ ಬಳಿಕ ಪ್ರಮುಖ ಫೀಚರ್‌ಗಳನ್ನೆಲ್ಲ ಪಾವತಿಸಿ ಪಡೆಯಬೇಕಾದ ಸೌಲಭ್ಯವಾಗಿರಿಸಿ, ಉಳಿದದ್ದನ್ನು ಮಾತ್ರ ಎಲ್ಲರಿಗೆ ತೆರೆದಿರಿಸುವ (ಅಂದ್ರೆ ಸ್ಥೂಲವಾಗಿ ದುಬಾರಿ ಮಾಲ್‌ನಲ್ಲಿ ತಿರುಗಾಡಿ ಬಂದಂತಹ ಅನುಭವ!) ಉದ್ದೇಶ ಇದ್ದಂತಿದೆ. ಅಂದರೆ, ಅವರೂ ಕೂಡ ತಮ್ಮನ್ನು ಫೇಸ್‌ಬುಕ್ಕಿಗೆ, ಟ್ವಿಟ್ಟರಿಗೆ, ಇನ್ಸ್ಟಗ್ರಾಮಿಗೆ ಅಥವಾ ವಾಟ್ಸಾಪ್‌ಗೆ ಒಂದು ಹೆಜ್ಜೆ ಮುಂದಿರುವ ಪರ್ಯಾಯ ಅಂದುಕೊಂಡಿಲ್ಲ. ಈ ಪ್ರತಿಯೊಂದೂ ಸೋಷಿಯಲ್ ಮೀಡಿಯಾಕ್ಕೆ ನಿರ್ದಿಷ್ಟ ಗ್ರಾಹಕರಿದ್ದು, ಅವರ ಕೆರೆತಗಳನ್ನವು ಯಶಸ್ವಿಯಾಗಿ ಪೂರೈಸಿವೆ. ಹಾಗಾಗಿಯೇ ಅವು ಸಕ್ಸಸ್‌ಫುಲ್. ಅಂತಹ ಯಾವುದೇ ಎಕ್ಸ್‌ಕ್ಲೂಸಿವ್ ಆಕರ್ಷಣೆ ಇಲ್ಲಿ ಇದ್ದಂತಿಲ್ಲ. ಸ್ಪಾಟಿಫೈ ನಂತಹ ಪ್ರಬಲ ಧ್ವನಿ ಮಾಧ್ಯಮಗಳು, ಝೂಮ್, ಟೀಮ್ಸ್, ವೆಬೆಕ್ಸ್ ಇತ್ಯಾದಿ ಮೀಟಿಂಗ್ ಮಾಧ್ಯಮಗಳು ಎಲ್ಲವೂ ತಮ್ಮ ತಮ್ಮ ಎಕ್ಸ್‌ಕ್ಲೂಸಿವ್ ಜಾಗಗಳಲ್ಲಿ ಮಾರುಕಟ್ಟೆಯ ಪಾಲು ಕಬಳಿಸಿ ಕುಳಿತಿವೆ. ಹಾಗಾಗಿ ಸದ್ಯಕ್ಕೆ ಕ್ಲಬ್‌ಹೌಸ್ ಸಂತೆಯೊಳಗೊಬ್ಬ ದಾಸಯ್ಯ. ಅಷ್ಟೇ.
#Clubhouse #ClubhouseReview

Social Plugin