◆ 'ಇಷ್ಟೆಲ್ಲಾ ಪ್ರತಿಭಾವಂತ ಅನುಭವಿ ಹಿರಿಯರಿದ್ದಾರೆ, ರಾಷ್ಟ್ರಪ್ರಶಸ್ತಿ ನನಗೇಕೆ ಕೊಟ್ರೋ...' - ಎಂದು ಪ್ರಶ್ನಿಸಿ ಈ ಪ್ರತಿಷ್ಠಿತ ಗೌರವವನ್ನು ನಿರಾಕರಿಸಲು ಹೊರಟಿದ್ದರಾ ಗೆಳೆಯ ಸಂಚಾರಿ ವಿಜಯ್? ◆
^^^^^^^^^^^^^^^^^^^^^^^^^^^^^^^^^^^^^^^^^^
ಲೇಖನ ✍️: ಹಿರಿಯ ಸಿನಿಮಾ ಪತ್ರಕರ್ತರು - ಗಣೇಶ್ ಕಾಸರಗೋಡು.✍️
     ಸಣ್ಣ ಕನ್ಫ್ಯೂಷನ್. 'ಶುಭಂ' ಪುಸ್ತಕದ ಲೋಕಾರ್ಪಣಾ ಸಮಾರಂಭದ ಹಿಂದಿನ ದಿನ ಗೆಳೆಯ ಸಂಚಾರಿ ವಿಜಯ್ ಹೀಗೆಂದು ನನಗೆ ಮೆಸೇಜ್ ಮಾಡಿದ್ದರು : 'ಸರ್, ಐ ಯಾಮ್ ಸೋ ಸಾರಿ ಸರ್. ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಬೇಕೆನ್ನುವ ಆಸೆಯಿತ್ತು. ಆದ್ರೆ ನಾನು ಚಾಮರಾಜನಗರದಲ್ಲಿದ್ದೇನೆ. ಯಾರಿಗೋ ನನ್ನಿಂದಾದ ಸಹಾಯ ಮಾಡಲು ಬಂದಿದ್ದೇನೆ. ಬೆಂಗಳೂರಿಗೆ ವಾಪಾಸ್ಸಾದಾಗ ನಿಮ್ಮ ಮನೆಗೆ ಬಂದು 'ಶುಭಂ' ಕಾಪಿ ಪರ್ಚೆಸ್ ಮಾಡ್ತೇನೆ...ಆಲ್ ದಿ ಬೆಸ್ಟ್ ಸರ್...' - ವಿಜಯ್ ಅವರ ಈ ಮೆಸೇಜ್ ಓದಿ ನಗಬೇಕೋ ಅಳಬೇಕೋ ಗೊತ್ತಾಗದೇ ನಾನೇ ಉತ್ತರಿಸಿದೆ : 'ಸರ್, ನೀವು ತಪ್ಪು ಡೇಟ್ ನೋಟ್ ಮಾಡಿಕೊಂಡಿದ್ದೀರಿ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಫಿಕ್ಸ್ ಆಗಿರೋದು ನಾಳೆ. ಸಂಜೆ ಹೊತ್ತಿಗೆ ಬಂದು ಬಿಡಿ. ನೀವು ಪಾಲ್ಗೊಳ್ಳಲೇ ಬೇಕಾದ ಕಾರ್ಯಕ್ರಮವಿದು...ದಯವಿಟ್ಟು ಬನ್ನಿ ಪ್ಲೀಸ್...' - ನನ್ನ ಮೆಸೇಜ್ ನೋಡುತ್ತಲೇ ಕಾಲ್ ಮಾಡಿ ಮಾತಾಡಿದ ವಿಜಯ್ ಆಗಿರುವ ಕನ್ಫ್ಯೂಷನ್'ಗಾಗಿ ಕ್ಷಮೆ ಯಾಚಿಸಿ, ನಾಳೆ ಖಂಡಿತಾ ಬರುವುದಾಗಿ ಪ್ರಾಮಿಸ್ ಮಾಡಿದರು.
     ಪ್ರಾಮಿಸ್ ಮಾಡಿದಂತೆ ಮಾರನೇ ದಿನ ಸಮಾರಂಭಕ್ಕೆ ಬಂದು ಶುಭ ಹಾರೈಸಿದರು. ಒಂದು ಕಾಲದಲ್ಲಿ ತಮಿಳು ಚಿತ್ರರಂಗವನ್ನಾಳಿದ ಕೋಕಿಲಾ ಮೋಹನ್ ಮತ್ತು ನಿರ್ದೇಶಕ ಭಾರ್ಗವ ಜತೆ ಕೂತು ಕಾರ್ಯಕ್ರಮ ವೀಕ್ಷಿಸಿದರು. ಹೋಗುವಾಗ 'ಶುಭಂ' ಕಾಪಿ ಖರೀದಿಸಿ ಗೂಗಲ್ ಪೇ ಮಾಡಲು ಮೊಬೈಲ್ ಬಟನ್ ಒತ್ತಿದಾಗ ಅದು ಸರ್ವಥಾ ಸೈಲೆಂಟಾಗಿತ್ತು...
     ಮಾರನೇ ದಿನ ಯಥಾಪ್ರಕಾರ ಮೆಸೇಜ್ : 'ಸರ್ ನಮಸ್ತೆ. ನಿನ್ನೆ 'ಶುಭಂ' ಪುಸ್ತಕವನ್ನು ತೆಗೆದುಕೊಂಡಿದ್ದೆ, google pay ವರ್ಕ್ ಆಗದ ಕಾರಣ ಹಣವನ್ನು ಪಾವತಿ ಮಾಡಿಲ್ಲ, ನಿಮ್ಮ google pay ನಂಬರ್ ಕಳಿಸಿದರೆ ಅಲ್ಲಿಗೇ ಹಣವನ್ನು ಹಾಕುವೆ...' - ನಂಬರ್ ಕಳಿಸುವ ಬದಲು ಮತ್ತೆ ಮೆಸೇಜ್ ಮಾಡಿದೆ : 'ವಿಜಯ್, ನೀವು ನನ್ನ ಸಮಾರಂಭಕ್ಕೆ ಬಂದಿರುವುದೇ ಒಂದು ಕೊಡುಗೆ. ಈ ಕಾಪಿ ನನ್ನ ಕೊಡುಗೆ ಎಂದೇ ತಿಳಿಯಿರಿ ಪ್ಲೀಸ್...' - ಇದಕ್ಕೆ ವಿಜಯ್ ರಿಪ್ಲೈ : 'ನೋ ಸರ್. ನಾನು ಪುಸ್ತಕವನ್ನು ಕೊಂಡುಕೊಂಡು ಓದೋನು. ದಯವಿಟ್ಟು ನಾನು ಕಳಿಸಿದ ಮೊತ್ತವನ್ನು ಸ್ವೀಕರಿಸಿ...'
     - ಇದಾದ ಸ್ವಲ್ಪ ದಿನಗಳಲ್ಲೇ ಸಂಚಾರಿ ವಿಜಯ್ ಕಡೆಯಿಂದ ಒಂದು ಪತ್ರ ವಾಟ್ಸಾಪ್ ಮೂಲಕ ಬಂತು...ಇದು ನ್ಯೂಸ್ 18 ಚಾನಲ್ಲಿಗೆ ಸಂಬಂಧಿಸಿದಂತೆ ಹರೀಶ್ ನಾಗರಾಜ್ ಕೊಟ್ಟ ಪತ್ರ. ಇವರ ರಾಷ್ಟ್ರಮಟ್ಟದ ಸಾಧನೆಗಾಗಿ ಈ ನ್ಯೂಸ್ ಚಾನಲ್ 'ವರ್ಷದ ಕನ್ನಡಿಗ' ಪ್ರಶಸ್ತಿಯನ್ನು ಘೋಷಿಸಿತ್ತು. ಆಗ ಮತ್ತೆ ಕನ್ಫ್ಯೂಸ್'ಗೊಳಗಾದ ವಿಜಯ್ ಈ ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದನ್ನು ಓದೋಣ : 'ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕನ್ನಡದ ಮೇರು ನಟರು, ನಿರ್ದೇಶಕರು, ತಂತ್ರಜ್ಞರಿಂದ ಹಿಡಿದು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಮಾಜಕ್ಕಾಗಿ, ಸಮಾಜದ ಒಳಿತಿಗಾಗಿ-ಏಳಿಗೆಗಾಗಿ ದುಡಿದ ಹಿರಿಯರನ್ನು ಗುರುತಿಸಿ ಗೌರವಿಸುವ ಈ ಪ್ರಶಸ್ತಿಗೆ ನಾನು ಅರ್ಹನೇ? ಕಲೆಯಲ್ಲಿ ಏನನ್ನಾದರೂ ಹುಡುಕಬೇಕು ಎಂದು ಅರಸಿ ಹೊರಟ ನನ್ನ ವೃತ್ತಿ ಜೀವನದಲ್ಲಿ ಸಿಕ್ಕ ಮನ್ನಣೆಗೆ/ಪ್ರಶಸ್ತಿಗೆ ಏನೋ ಅದ್ಭುತವಾದುದ್ದನ್ನು ಸಾಧಿಸಿದೆ ಎಂದು ಬೀಗಬೇಕೇ? ನಾನು ಮಾಡಿದ ಸಣ್ಣ ಪುಟ್ಟ ಸಾಮಾಜ ಸೇವೆಗೆ ಪ್ರತಿಷ್ಠಿತ ಪುರಸ್ಕಾರವೇ? ಇದಕ್ಕೆ ಪ್ರತಿಕ್ರಯಿಸಿದರೆ ತಪ್ಪಾದೀತೇ? ಒಪ್ಪಿಕೊಳ್ಳದಿದ್ದರೆ ಅಧಿಕಪ್ರಸಂಗತನವಾದೀತೇ? ಸುಮ್ಮನಿದ್ದರೆ ಮನಸ್ಸು ಒಪ್ಪುವುದೇ? ಹೀಗೆ ನನಗೆ ನಾನೆ ಏನೇನೋ ಪ್ರಶ್ನೆಗಳನ್ನು ಹಾಕಿಕೊಂಡು ಮನಸ್ಸು ಕಕ್ಕಾಬಿಕ್ಕಿಯಾಗಿ ಎಷ್ಟು ಯೋಚಿಸಿದರೂ ನನಗೆ ತಾರ್ಕಿಕವಾದ ಉತ್ತರ ಸಿಗಲೇ ಇಲ್ಲ...'
                                     ◆   
      ಸಂಚಾರಿ ವಿಜಯ್ ವಾಟ್ಸಾಪ್ ಮೂಲಕ ಕಳಿಸಿಕೊಟ್ಟ ಪತ್ರಕ್ಕೆ ನಾನು ಹೀಗೆ ಉತ್ತರಿಸಿದ್ದೆ : 'ಗೆಳೆಯರೇ, ನಿಮ್ಮ ಆತ್ಮಸಾಕ್ಷಿ ಏನು ಹೇಳುತ್ತದೋ ಹಾಗೆಯೇ ಮಾಡಿ. ಆದರೆ ಪ್ರೀತಿಯಿಂದ ಮತ್ತು ಗೌರವದಿಂದ ಕೊಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀವು ನಿರಾಕರಿಸಬಾರದೆನ್ನುವುದು ನನ್ನ ಅಭಿಪ್ರಾಯ...' - ಎಂದು ಮೆಸೇಜ್ ಮಾಡಿದೆ...ಆಗ ನನಗೆ ನೆನಪಾದದ್ದು 'ನಾನು ಅವನಲ್ಲ ಅವಳು' ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರೀಯ ಶ್ರೇಷ್ಠನಟ ಪ್ರಶಸ್ತಿಯನ್ನು ನಿರಾಕರಿಸುವ ವಿಜಯ್ ಅವರ ಯೋಚನೆಯ ಪ್ರಸಂಗ...
     - ಈಗ ಇವೆಲ್ಲಾ ನೆನಪುಗಳು ಮಾತ್ರ. ಇದೀಗ ಸಂಚಾರಿ ವಿಜಯ್ ಕೂಡಾ ನೆನಪಾಗಿ ಉಳಿದಿರುವುದು ಮಾತ್ರ ದುರಾದೃಷ್ಟಕರ...ಮಿಸ್ ಯೂ ವಿಜಯ್...👏✍️: ಹಿರಿಯ ಸಿನಿಮಾ ಪತ್ರಕರ್ತರು - ಗಣೇಶ್ ಕಾಸರಗೋಡು.