ತೇರದಾಳದ ಅಂಬೇಡ್ಕರ ಸರ್ಕಲ್‍ದಲ್ಲಿರುವ ಚರಂಡಿಯನ್ನು ಜೆಸಿಬಿಯಿಂದ ಸ್ವಚ್ಚಗೊಳಿಸುತ್ತಿರುವುದು.
ಪಟ್ಟಣವನ್ನು ಸುಂದರ ಸ್ವಚ್ಚ ಸ್ವಾಸ್ಥ್ಯ ಮಾಡುವುದೇ ನನ್ನ ಗುರಿ
ತೇರದಾಳ : ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು, ಬೀದಿ ದೀಪಗಳು ಹಾಗೂ ಸ್ವಚ್ಚತೆಗೆ ಹೆಚ್ಚಿ ಗಮನ ಕೊಡಲಾಗುವುದು ಎಂದು ನೂತನ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಹೇಳಿದರು.
ಪಟ್ಟಣದ ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚರಂಡಿ ಸ್ವಚ್ಚತೆಯನ್ನು ಇಂದು ಪ್ರಾರಂಭಿಸಿದರು. ಜೆಸಿಬಿ ಮುಖಾಂತರ ಚರಂಡಿಯಲ್ಲಿ ಕೊಳಚೆಯನ್ನು ಟ್ರಾಕ್ಟರ್ ಮುಖಾಂತರ ಬೇರೆಡೆಗೆ ಸ್ಥಳಾಂತರ ಮಾಡುವ ಮೂಲಕ ಸ್ವಚ್ಚತೆಯನ್ನು ಪ್ರಾರಂಭಿಸಿದರು. ಪ್ರತಿ ಬೀದಿ ದೀಪಗಳ ಕಂಬಗಳಿಗೆ ದೀಪಗಳನ್ನು ಅಳವಡಿಸಲಾಗುವುದು. ಹಾಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆಯನ್ನು ಮಾಡಲಾಗುವುದು.
ಪುರಸಭೆ ಪೌರ ಕಾರ್ಮಿಕರಿಗೆ ಹಾಗೂ ನೀರು ಸರಬರಾಜು ವಿಭಾಗದ ಕಾರ್ಮಿಕರಿಗೆ ಸರಿಯಾಗಿ ವೇತನ ಆಗುತ್ತಿಲ್ಲ. ಈ ವ್ಯವಸ್ಥೆಯನ್ನು ಸರಿಪಡಿಸಿ ಪ್ರತಿ ತಿಂಗಳು ವೇತನ ಸಿಗುವಂತೆ ಮಾಡಲಾಗುವುದು. ಪಟ್ಟಣ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅವಶ್ಯಕ. ಪಟ್ಟಣದ ಅಭಿವೃದ್ಧಿ ಕೆಲಸಗಳು ಹತ್ತು ವರ್ಷಗಳ ಹಿಂದೆ ಹೋಗಿದೆ. ಅದನ್ನು ಸರಿಪಡಿಸಲು ಈಗ ಎಲ್ಲರ ಸಹಕಾರ ಅಗತ್ಯ. ಸುಂದರವಾದ ಒಂದು ಉದ್ಯಾನವನವನ್ನು ಮಾಡಬೇಕಾಗಿದೆ. ಎಲ್ಲ ಅಭಿವೃದ್ಧಿ ಕೆಲಸಗಳಿಗೆ ನನ್ನೊಬ್ಬನಿಂದ ಸಾಧ್ಯವಿಲ್ಲ. ಸಾರ್ವಜನಿಕರು ಹಾಗೂ ಪುರಸಭೆ ಆಯ್ಕೆಯಾಗಿರುವ ಜನ ಪ್ರತಿನಿಧಿಗಳ ಸಹಕಾರ ಅಗತ್ಯವಿದೆ. ಇಲ್ಲಿ ಯಾರಿಗೂ ತಾರತಮ್ಯ ಮಾಡದೇ ಎಲ್ಲರೂ ಸಮಾನರು, ಎಲ್ಲ ವಾರ್ಡಗಳಿಗೂ ಸಮನಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಇಲ್ಲಿ ಸಿಬ್ಬಂದಿಗಳ ಕೊರತೆಯಿದ್ದರೂ ಇದ್ದ ಸಿಬ್ಬಂದಿಗಳಲ್ಲಿಯೇ ಕೆಲಸಗಳನ್ನು ಮಾಡಲಾಗುವುದು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಪುರಸಭೆಯ ಸಹಾಯ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಲಾಗುವುದು. ಸುಮಾರು ಐದು ಸಾವಿರ ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗುವುದು. ಕೊರೊನಾ ಪರಿಸ್ಥಿತಿಯಲ್ಲಿ ಆಮ್ಲಜನಕದ ಮಹತ್ವ ಈಗ ಗೊತ್ತಾಗಿದೆ. ಇದನ್ನು ಸುಂದರ ಪಟ್ಟಣವನ್ನು ಮಾಡಲಾಗುವುದು ಎಂದರು.

Social Plugin