ವರದಿ : ವಿಜಯ ವಾಜಂತ್ರಿ
ತೇರದಾಳದ ವಾರ್ಡ ನಂ 23ರಲ್ಲಿನ ಅಂಬಿಗರ ಚೌಡಯ್ಯನ ಗುಡಿಯ ಹತ್ತಿರ ಚರಂಡಿ ನೀರು ರಸ್ತೆಯ ಮೇಲೆ ನಿಂತಿದ್ದು.

ಚರಂಡಿ ನೀರಿಗೆ ದಾರಿ ಯಾವುದಯ್ಯ
ತೇರದಾಳ : ಪಟ್ಟಣದ ವಾರ್ಡ ನಂ23ರಲ್ಲಿ ಅಂಬಿಗರ ಚೌಡಯ್ಯ ಗುಡಿಯ ಹತ್ತಿರದ ಚರಂಡಿ ನೀರು ಹೋಗಲು ದಾರಿಯಿಲ್ಲದೆ ರಸ್ತೆಯ ಮೇಲೆ ನಿಂತಿರುವುದರಿಂದ ಅಲ್ಲಿನ ನಿವಾಸಿಗಳು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
   ಚರಂಡಿ ನೀರು ಹೋಗಲು ದಾರಿಯಿಲ್ಲದೆ ರಸ್ತೆ ಮನೆಯಂಗಳದಲ್ಲಿ ನೀರು ನಿಂತು ನಿವಾಸಿಗಳು ಸಂಚರಿಸಲು ತೊಂದರಯಾಗುತ್ತಿದೆ ಎಂದು ಅವರು ಪತ್ರಿಕೆಗೆ ತಿಳಿಸಿದರು. ಇಲ್ಲಿ ಚಿಕ್ಕ ಚಿಕ್ಕ ಮಕ್ಕಳು ಆಟ ಆಡಲು ಅಂಗಳವೇ ಇಲ್ಲದಂತಾಗಿದೆ. ನಲ್ಲಿಗಳಲ್ಲಿ ನೀರು ಬಂದರೆ ಚರಂಡಿಯ ಮುಖಾಂತರ ತ್ಯಾಜ್ಯ ನೀರು ಬಂದು ಮನೆಯ ಅಂಗಳ ಹಾಗೂ ದೇವಸ್ಥಾನದ ಅಂಗಳದಲ್ಲಿ ಬಂದು ಜಮಾವಣೆಗೊಳ್ಳುತ್ತದೆ. ಇದರಿಂದ ಮಕ್ಕಳು ಆಟ ಆಡಲು ಸ್ಥಳವೇ ಇಲ್ಲದಂತಾಗಿದೆ. ಇಲ್ಲಿನ ಚರಂಡಿಗಳು ಬಹಳ ಆಳವಾಗಿದ್ದು ಚಿಕ್ಕ ಮಕ್ಕಳು ಅದರಲ್ಲಿ ಆಯ ತಪ್ಪಿ ಬಿದ್ದರೆ ಅಪಾಯ ತಪ್ಪಿದ್ದಲ್ಲ. ಹಾಗೂ ಚರಂಡಿಯೊಳಗಿನ ಕೊಳಚೆಯನ್ನು ಇಲ್ಲಿನ ನಿವಾಸಿಗಳು ತಗೆದು ಚರಂಡಿ ದಂಡೆಯ ಮೇಲೆ ಹಾಕಿದರೆ ಅದನ್ನು ತಗೆದುಕೊಂಡು ಹೋಗುವುದಿಲ್ಲವೆಂದು ನಿವಾಸಿಗಳ ಆರೋಪಿಸಿದರು. ಈ ಚರಂಡಿ ನೀರು ಹರಿದು ಹೋಗಲು ದಾರಿಯಿಲ್ಲದೇ ಅಲ್ಲಿಯೇ ನಿಂತು ಅಲ್ಲಿನ ನಿವಾಸಿಗಳಿಗೆ ತೊಂದರೆಯುಂಟು ಮಾಡುತ್ತಿದೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಅವರು ದೂರಿದ್ದಾರೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಚರಂಡಿ ಸ್ವಚ್ಚ ಮಾಡುವುದು ಹಾಗೂ ಚರಂಡಿ ನೀರು ಹೋಗಲು ಶಾಶ್ವತವಾದ ದಾರಿ ಮಾಡಬೇಕು ಇಲ್ಲವಾದರೆ ಬರುವ ದಿನಮಾನಗಳಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಘವೇಂದ್ರ ಚರೋಟಿ, ಬಸಪ್ಪ ಚರೋಟಿ, ಅವ್ವಪ್ಪ ನೀಲನ್ನವರ, ಭರಮು ಬುರುಡ, ಚಂದ್ರವ್ವ ಸುಣಗಾರ ಸೇರಿದಂತೆ ಇನ್ನಿತರರು ತಿಳಿಸಿದ್ದಾರೆ.
   ಪುರಸಭೆ ಮಾಜಿ ಸದಸ್ಯ ಪ್ರಭು ಗಸ್ತಿ ಮಾತನಾಡಿ ನಮ್ಮ ವಾರ್ಡಿಗೆ ಪೌರ ಕಾರ್ಮಿಕರು ಚರಂಡಿ ಸ್ವಚ್ಚ ಮಾಡಲು ಬರುವುದಿಲ್ಲ. ಅಧಿಕಾರಿಗಳು ಹೇಳಿದ ವಾರ್ಡಿಗಳಿಗೆ ಸ್ವಚ್ಚ ಮಾಡಲು ಹೋಗುತ್ತಾರೆ. ಪುರಸಭೆ ಅಧಿಕಾರಿಗಳು ವಾರ್ಡ ಸ್ವಚ್ಚತೆ ಮಾಡುವಲ್ಲಿ ತಾರತಮ್ಮ ಮಾಡುತ್ತಿದ್ದಾರೆ ಎಂದರು.