ಕೊರೊನಾ ಮೊದಲನೇ ಅಲೆ ಕಂಡುಬಂದ ಸಂದರ್ಭದಲ್ಲಿ ಈ ಖಾಸಗಿ ವಾರ್ತಾ ವಾಹಿನಿಗಳು ತಬ್ಲಿಘಿ ಜಮಾತ್ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ವರದಿ ಮಾಡಿದ್ದವು. ದ್ವೇಷ ಹರಡುವಿಕೆ ನೆಲೆಯಲ್ಲಿ ಸುದ್ದಿ ನೀಡಿದ್ದವು. ಆದ್ದರಿಂದ ಎನ್ಬಿಎಸ್ಎ ಈ ವಾಹಿನಿಗಳ ವಿರುದ್ಧ ಕ್ರಮ ಕೈಗೊಂಡಿದೆ.
ಕ್ಯಾಂಪೇನ್ ಅಗೈನ್ಸ್ಟ್ ಹೇಟ್ ಸ್ಪೀಚ್ (CAHS) ಫೆಬ್ರವರಿ 2020ರಲ್ಲಿ ನಿಯೋಜನೆಗೊಂಡಿದ್ದು, ಮಾಧ್ಯಮದಲ್ಲಿ ವರದಿಯಾಗುವ ಧ್ವೇಷಪೂರಿತ ಸುದ್ದಿಗಳನ್ನು ಗಮನಿಸಿ, ಕ್ರಮ ಕೈಗೊಳ್ಳುತ್ತದೆ. ಇದೀಗ ಸಿಎಎಚ್ಎಸ್ ದೂರಿನ ಅನ್ವಯ ಒಟ್ಟು ಮೂರು ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಕನ್ನಡದ ನ್ಯೂಸ್ ಚಾನಲ್ಗಳಾದ ಸುವರ್ಣ ನ್ಯೂಸ್ ಹಾಗೂ ನ್ಯೂಸ್ 18 ಕನ್ನಡ, ಇಂಗ್ಲಿಷ್ನ ಟೈಮ್ಸ್ ನೌ ವಾಹಿನಿಯ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ನ್ಯೂಸ್ 18 ಕನ್ನಡ ಚಾನಲ್ ಮೇಲೆ 1 ಲಕ್ಷ ಹಾಗೂ ಸುವರ್ಣ ನ್ಯೂಸ್ ಮೇಲೆ 50,000 ದಂಡ ವಿಧಿಸಲಾಗಿದೆ. ಹಾಗೂ ಜೂನ್ 23ರಂದು 9 ಗಂಟೆಯ ನ್ಯೂಸ್ಗೂ ಮುನ್ನ ಬಹಿರಂಗವಾಗಿ ಕ್ಷಮಾಪಣೆ ಕೋರಬೇಕು ಎಂದು ಕೇಳಲಾಗಿದೆ.
ಎರಡೂ ಚಾನಲ್ಗಳು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವರದಿ ಅಥವಾ ವಿಡಿಯೋಗಳು ತಮ್ಮ ವೆಬ್ಸೈಟ್ ಅಥವಾ ಯೂಟ್ಯೂಬ್ನಲ್ಲಿ ಇದ್ದರೆ, ಅದನ್ನು ಕೂಡಲೇ ಡಿಲೀಟ್ ಮಾಡಬೇಕು ಹಾಗೂ 7 ದಿನಗಳ ಒಳಗಾಗಿ ಈ ಬಗ್ಗೆ ಲಿಖಿತ ದಾಖಲೆ ಸಲ್ಲಿಸಬೇಕು ಎಂದು ಕೇಳಲಾಗಿದೆ.
ನ್ಯೂಸ್ 18 ಕನ್ನಡದಲ್ಲಿ ಏಪ್ರಿಲ್ 1, 2020ರಂದು ಪ್ರಸಾರವಾಗಿದ್ದ ಕಾರ್ಯಕ್ರಮದ ವಿರುದ್ಧ ಹಾಗೂ ಸುವರ್ಣ ನ್ಯೂಸ್ನಲ್ಲಿ ಮಾರ್ಚ್ 31, 2020 ರಿಂದ ಏಪ್ರಿಲ್ 4, 2020ರ ವರೆಗೆ ಪ್ರಸಾರವಾಗಿದ್ದ ಕೆಲವು ಕಾರ್ಯಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Social Plugin