◆ ದರ್ಶನ್ ನಟನೆಯ ಸೂಪರ್ ಹಿಟ್ 'ಸಾರಥಿ' ಸಿನಿಮಾವನ್ನು ಶುರುಮಾಡಿದ್ದು ಕೆ.ಸಿ.ಎನ್.ಚಂದ್ರಶೇಖರ್, ಮುಗಿಸಿದ್ದು ಕೆ.ವಿ.ಸತ್ಯ ಪ್ರಕಾಶ್! ಯಾಕೆ ಹೀಗೆ? ◆
^^^^^^^^^^^^^^^^^^^^^^^^^^^^^^^^^^^^^^^^^^
● ಕೆ.ಸಿ.ಎನ್.ಚಂದ್ರಶೇಖರ್ ಒಂದು ನೆನಪು ●
^^^^^^^^^^^^^^^^^^^^^^^^^^^^^^^^^^^^^^^^^^
ಲೇಖನ : ಗಣೇಶ ಕಾಸರಗೋಡು.ಹಿರಿಯ ಸಿನಿಮಾ ಪತ್ರಕರ್ತರು.*******************
 **************************************
     ಎಲ್ಲವೂ ಯೋಜನೆಯಂತೆಯೇ ನಡೆದಿದ್ದರೆ ದರ್ಶನ್ ನಾಯಕತ್ವದ ಸೂಪರ್ ಹಿಟ್ ಸಿನಿಮಾ 'ಸಾರಥಿ'ಯನ್ನು ಕನ್ನಡ ಚಿತ್ರರಂಗದ ಪಿಲ್ಲರ್ ಎಂದೇ ಕರೆಯಲ್ಪಡುವ ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಿಸಬೇಕಾಗಿತ್ತು. ಆದರೆ ಆದದ್ದೇ ಬೇರೆ. ಆ ನಿಗೂಢ ಕಥೆಯ ಬೆನ್ನು ಹತ್ತಿ ಹೋದರೆ ಸಿಗುವ ರೋಚಕ ಅಂಶವೆಂದರೆ :
     ಚಿತ್ರರಂಗದಲ್ಲೊಂದು ಮಾತಿದೆ : ಅನ್ನದ ಅಗುಳಿನ ಮೇಲೆ ಯಾರ ಹೆಸರು ಬರೆದಿರುತ್ತದೋ ಅವರಿಗೇ ಊಟ ಸಿಗುತ್ತದೆ! ಎಂಥಾ ಅರ್ಥಪೂರ್ಣ ಮಾತಲ್ಲವೇ?
     ಈ ಮಾತು ಇಲ್ಲೇಕೆ ನೆನಪಾಯಿತೆಂದರೆ : ವಾಸ್ತವವಾಗಿ 'ಸಾರಥಿ' ಚಿತ್ರವನ್ನು ಖ್ಯಾತ ನಿರ್ಮಾಪಕ, ವಿತರಕರೂ ಆದ ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಿಸಬೇಕಾಗಿತ್ತು. ಈ ಚಿತ್ರಕ್ಕೆ ಸಂಬಂಧಿಸಿದ ಪ್ರಾರಂಭಿಕ ಕೆಲಸಗಳನ್ನೆಲ್ಲಾ ಮಾಡಿದವರು ಚಂದ್ರು ಅವರೇ. ಆದರೆ ಒಂದು ಹಂತದಲ್ಲಿ ಖರ್ಚು ವಿಪರೀತವಾಗುತ್ತದೆ ಎಂದರಿವಾದಾಗ ಜಾಣತನದಿಂದ ಹಿಂದೆ ಸರಿದು ತಮ್ಮ ಖಾಸಾ ಭಾಮೈದ ಕೆ.ವಿ.ಸತ್ಯಪ್ರಕಾಶ್ ಕೈಗೊಪ್ಪಿಸಿದರು. ಇದರ ಹಿನ್ನೆಲೆಯಲ್ಲೂ ಒಂದು ಕಾರಣವಿದೆ. ಈ ಹಿಂದೆ ದರ್ಶನ್ ಕಾಲ್'ಶೀಟ್ ಪಡೆದು ಇದೇ ಚಂದ್ರು ಅವರು 'ಭೂಪತಿ' ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಆದರೆ ಈ ಸಿನಿಮಾ ಮಕಾಡೆ ಮಲಗಿದ್ದರಿಂದಾಗಿ ಆರ್ಥಿಕವಾಗಿ ಸುಧಾರಿಸಿಕೊಳ್ಳಲೆಂದೇ ಮತ್ತೆ ದರ್ಶನ್ ಕಾಲ್'ಶೀಟ್ ಪಡೆದು 'ಸಾರಥಿ' ಶುರು ಮಾಡಿದ್ದರು ಚಂದ್ರು.
     ಆದರೆ ನಿರ್ಮಾಣದ ಈ ಬದಲಾವಣೆಯ ಮಾತುಕತೆಯನ್ನು ದರ್ಶನ್ ಒಪ್ಪಿಕೊಳ್ಳಲಿಲ್ಲ. ಸ್ವಲ್ಪ ಬೇಸರ ಮಾಡಿಕೊಂಡ ದರ್ಶನ್ ಇದರ ಯೋಚನೆ ಬಿಟ್ಟು ಬೇರೆ ಬೇರೆ ಪ್ರಾಜೆಕ್ಟ್'ಗಳಲ್ಲಿ ಬಿಜಿಯಾದರು. ಯಾವಾಗ 'ಸಾರಥಿ'ಯ ಸಂಪೂರ್ಣ ಸ್ವಾಮ್ಯವನ್ನು ಸತ್ಯಪ್ರಕಾಶ್ ವಹಿಸಿಕೊಂಡರೋ ಮತ್ತೆ ದರ್ಶನ್ ಉತ್ಸಾಹ ಗರಿಗೆದರಿತು. ಜತೆಗೆ ತಮ್ಮ ಸೋದರ ದಿನಕರ್ ನಿರ್ದೇಶಕನೆನ್ನುವ ಅಭಿಮಾನ ಬೇರೆ. ತಕ್ಷಣವೇ ಇತರೆಲ್ಲಾ ಪ್ರಾಜೆಕ್ಟ್'ಗಳನ್ನು ಮುಂದಕ್ಕೆ ಹಾಕಿ 'ಸಾರಥಿ' ಬಗ್ಗೆ ಹೆಚ್ಚು ಕಾನ್ಸನ್ಟ್ರೇಟ್ ಮಾಡತೊಡಗಿದರು ದರ್ಶನ್.
 ಈ ಬಗ್ಗೆ ಸ್ವತಃ ಕೆ.ಸಿ.ಎನ್.ಚಂದ್ರಶೇಖರ್ ಹೇಳುವುದನ್ನು ಕೇಳಿ : 'ಸಾರಥಿ ಸಿನಿಮಾದ ರಿಲೇ ಆರಂಭಿಸಿದ್ದೇ ನಾನು. ನಡುವೆ ನನ್ನ ಕೈಲಿದ್ದ ಕೋಲನ್ನು ಬೇರೆಯವರಿಗೆ ಕೊಟ್ಟೆ. ಅವರು ಅದನ್ನು ಅತ್ಯಂತ ಜವಾಬ್ದಾರಿಯಿಂದ, ನಿಷ್ಠೆಯಿಂದ ಗುರಿ ಮುಟ್ಟಿಸಿದರು. ಆದರೆ ನಾನು ಮೊದಲು ಕೃತಜ್ಞತೆ ಹೇಳಬೇಕಾಗಿರುವುದು ದರ್ಶನ್'ಗೆ. ಈ ಸಿನಿಮಾಕ್ಕೆ ಅವರ ಹಾರ್ದಿಕ ಸಹಕಾರ ಇಲ್ಲದಿರುತ್ತಿದ್ರೆ ಶೂಟಿಂಗ್ ಹಂತದಲ್ಲೇ ಮಕಾಡೆ ಮಲಗಿ ಬಿಡುತ್ತಿತ್ತು. ಅಷ್ಟೊಂದು ಡಿಮಾಂಡ್ ಇದ್ದ ಸೂಪರ್ ಸ್ಟಾರ್ ಅವರು. ಆದರೂ ನಮ್ಮ ಈ ಪ್ರಾಜೆಕ್ಟಿಗಾಗಿ ಉಳಿದೆಲ್ಲವನ್ನೂ ಬದಿಗೊತ್ತಿ ನಮ್ಮೊಂದಿಗೆ ಸಹಕರಿಸಿದರು... ಎರಡನೇ ಕೃತಜ್ಞತೆ ನಿರ್ದೇಶಕ ದಿನಕರ್ ಅವರಿಗೆ ಸಲ್ಲಿಸಬೇಕು. ಆರಂಭದಿಂದಲೂ ಹೀಗೆಯೇ ಬೇಕು, ಇದೇ ಬೇಕು ಅಂತ ಇಂಚಿಂಚಿಗೂ ಹಠ ಮಾಡೋನು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿದರು. ಹಿಂದೆ ಪುಟ್ಟಣ್ಣನವರೂ ಹೀಗೆಯೇ ಹಠ ಮಾಡುತ್ತಿದ್ದರು. ದಿನಕರ್ ಯಾಕೆ ಪಟ್ಟು ಹಿಡಿದು ಹಠ ಮಾಡುತ್ತಿದ್ದ ಅನ್ನುವುದಕ್ಕೆ ಉತ್ತರವೇ ಈ 'ಸಾರಥಿ'! ಮೂರನೆಯದಾಗಿ ನನ್ನ ಭಾವೈದ ಕೆ.ವಿ.ಸತ್ಯಪ್ರಕಾಶ್. ಲಾಸ್ಟ್ ಮಿನಿಟ್'ನಲ್ಲಿ ಪ್ರಾಜೆಕ್ಟ್ ಅವರ ಕೈಗೆ ಬಿಟ್ಟುಕೊಟ್ಟಾಗ ಸಾವಕಾಶವಾಗಿ ಚಿತ್ರೀಕರಣ ಮುಗಿಸಿ ರಿಸ್ಕಿನಲ್ಲೇ ಬಿಡುಗಡೆ ಮಾಡುವ ಧೈರ್ಯ ಮಾಡಿ ಗೆದ್ದರು...ಬದ್ಧತೆ, ವೃತ್ತಿಪರತೆ ಶುದ್ಧವಾಗಿದ್ದರೆ ಜನ ಕೈ ಹಿಡಿಯುತ್ತಾರೆ ಅನ್ನುವುದಕ್ಕೆ 'ಸಾರಥಿ' ಸ್ಪಷ್ಟ ನಿದರ್ಶನ...' - ಈ ಮಾತನ್ನು ಕೆ.ಸಿ.ಎನ್.ಚಂದ್ರಶೇಖರ್ ಹೇಳಿದ್ದು 'ಸಾರಥಿ' ತೆರೆಕಂಡ ಮಾರನೇ ವಾರ.
      ಇಂಥಾ ಒಬ್ಬ ಪ್ರಯಾಣಿಕ ನಿರ್ಮಾಪಕ ಇಂದು ನಮ್ಮ ಜತೆಗಿಲ್ಲ. ಉದ್ಯಮದ ಪಿಲ್ಲರ್ ಆಗಿಯೇ ಉಳಿಯುವ ಇಂಥಾ ಸಮರ್ಥರ ಕೊರತೆ ನಮ್ಮ ಚಿತ್ರರಂಗದ ಪಾಲಿಗೆ ನುಂಗಲಾರದ ತುತ್ತು...ಶುಭಂ...
                         ◆ ಓಂ ಶಾಂತಿ...