ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಸವದಿ ಚಾಲನೆ
ರಬಕವಿ-ಬನಹಟ್ಟಿ,ಮೇ29: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರೋಗ ನಿಯಂತ್ರಣ ಹಾಗು ಜಾಗೃತಿಗಾಗಿ ರೂಪಿಸಿರುವ `ವೈದ್ಯರ ನಡೆ ಹಳ್ಳಿ ಕಡೆ’ ಎಂಬ ಕಾರ್ಯಕ್ರಮಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. 
 ಸಮೀಪದ ಕುಲಹಳ್ಳಿ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಭೆ ಸೇರಿ ಮಾತನಾಡಿದ ಅವರು, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಹಾಸಿಗೆ, ಉಚಿತ ಊಟದ ವ್ಯವಸ್ಥೆ, ಬಿಸಿ ನೀರು, ಪ್ರತ್ಯೇಕ ಶೌಚಾಲಯ ಸೇರಿ ವಿಶೇಷ ಕಾಳಜಿಯಿಂದ ಹಾಗು ಮಕ್ಕಳ ರೀತಿಯಲ್ಲಿ ಆರೈಕೆ ಮಾಡಲು ವೈದ್ಯರು ಹಾಗು ಶುಶ್ರೂಷಕರು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳ್ನು ಕಲ್ಪಿಸಲಾಗಿದೆ. ಹಾಗಾಗಿ ಕೋವಿಡ್ ಸೋಂಕು ದೃಢಪಟ್ಟಲ್ಲಿ ಹೋಂ ಐಸೋಲೇಶನ್ ಬದಲಾಗಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಸವದಿ ತಿಳಿಸಿದರು.
 ಗ್ರಾಮಣದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಸೋಂಕು ತಡೆಗಟ್ಟುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೋವಿಡ್ ಲಕ್ಷಣಗಳಿರುವವರು ತಕ್ಷಣ ಪರೀಕ್ಷೆ ಮಾಡಿಸಬೇಕೆಂದರು.
 ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಂಡು, ಸೋಂಕಿನ ಪ್ರಸರಣದ ಸರಪಳಿ ತುಂಡರಿಸುವದು ಹಾಗು ಜನರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ `ವೈದ್ಯರ ನಡೆ ಹಳ್ಳಿ ಕಡೆ’ಯ ಉದ್ದೇಶವಾಗಿದೆ ಎಂದರು.
 ತಹಶೀಲ್ದಾರ ಸಂಜಯ ಇಂಗಳೆ, ತಾಲೂಕಾ ವೈದ್ಯಾಧಿಕಾರಿ ಡಾ. ಗೈಬುಸಾಬ ಗಲಗಲಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಸೇರಿದಂತೆ ಆಶಾ ಹಾಗು ಅಂಗನವಾಡಿ ಕಾರ್ಯಕರ್ತೆಯರಿದ್ದರು.