ಬನಹಟ್ಟಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.
ಸಿಡಿ ಪ್ರಕರಣ: ಸರ್ಕಾರದ ಋಣ ಸಂದಾಯ ಖಂಡನೆ-ಉಮಾಶ್ರೀ

ರಬಕವಿ-ಬನಹಟ್ಟಿ,ಮೇ29: ಆಡಳಿತ ನಡೆಸುವ ಒಂದೇ ಆಸೆಗಾಗಿ ಪ್ರಭಾವಿಯಾಗಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಕರಣವನ್ನು ಮಣ್ಣು ಪಾಲಾಗಿಸಿ ಸರ್ಕಾರದ ಋಣ ಸಂದಾಯಕ್ಕೆ ಮುಂದಾಗುತ್ತಿರುವ ಬಿಎಸ್‍ವೈ ನೇತೃತ್ವದ ರಾಜ್ಯ ಸರ್ಕಾರದ ನಡೆಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದು ಪಕ್ಷದ ವಕ್ತಾರೆ, ಮಾಜಿ ಸಚಿವೆ ಉಮಾಶ್ರೀ ಹೇಳಿದರು.
 ಬನಹಟ್ಟಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡೆರಡು ಮುಖ, ನಾಲಿಗೆ ಹೊಂದಿರುವ ರಮೇಶ ಜಾರಕಿಹೊಳಿ ಪದೇ ಪದೇ ಗೃಹಮಂತ್ರಿ ಮುಂದೆ ರಕ್ಷಣೆ ಕೋರಿದ್ದೇಕೆ? ಬಂಧನದ ಭೀತಿಯಿದ್ದರೂ ಸರ್ಕಾರ ಉರುಳಿಸುವ ಶಕ್ತಿಯಿದೆ ಎಂಬ ಸ್ವಾರ್ಥ ಉದ್ದೇಶಕ್ಕಾಗಿ ರಾಜ್ಯದ ಮಹಿಳೆಯ ಮಾನ ಹರಾಜಾಗಿದ್ದರೂ ಸರ್ಕಾರದ ನೀತಿ ಉಳ್ಳವರಿಗೊಂದು, ಬಡವರಿಗೊಂದು ನೀಡುತ್ತಿರುವದು ಬಟಾಬಯಲಾಗಿದೆ. ಜೈಲು ಪಾಲಾಗಬೇಕಿರುವ ಹಕ್ಕಿ ಇಂದು ಪ್ರಭಾವ ಬಳಸಿ ಸ್ವತಂತ್ರ ಹಕ್ಕಿಯಾಗಿ ಹಾರಾಡುತ್ತಿದೆ. ಆಡಳಿತ ನಡೆಸಬೇಕೆಂಬ ಒಂದೇ ದುರಾಸೆಯಿಂದ ಅನ್ಯಾಯವಾದರೂ ಮಹಿಳೆಗೆ ನ್ಯಾಯ ಒದಗಿಸಲು ನಿಸ್ಸಹಾಯಕ ನಡೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.
ವಿಪಕ್ಷದ ಮೇಲೆ ಗೂಬೆ: ಸರ್ಕಾರವೇ ಅತ್ಯಾಚಾರಿ ಬೆನ್ನು ಬಿದ್ದು ರಕ್ಷಣೆಯಲ್ಲಿರುವಾಗ ವಿನಾಕಾರಣ ಕಾಂಗ್ರೆಸ್ ನಾಯಕರುಗಳ ಮೇಲೆ ಗೂಬೆ ಕೂಡ್ರಿಸುವ ವ್ಯವಸ್ಥೆ ನಡೆಸಿದ ಬಿಜೆಪಿಯು 376 ಕಾಯ್ದೆಯನ್ವಯ ಬಲಾತ್ಕಾರ ಪ್ರಕರಣಕ್ಕೆ ಯಾವ ನ್ಯಾಯ ಒದಗಿಸಬೇಕೋ ಅದು ನಡೆಯುತ್ತಿಲ್ಲ. ಚಾರ್ಜ್‍ಸೀಟ್ ಸಲ್ಲಿಸಿ 60 ದಿನಗಳಾದರೂ ಇನ್ನೂ ಆರೋಪಿ ಬಂಧನ ಮಾಡದೆ ಅಧಿಕಾರಿಗಳನ್ನು ರಜೆಯ ನಿಮಿತ್ತ ಮನೆಗೆ ಕಳಿಸುವ ಹುನ್ನಾರ ಬಿಜೆಪಿ ಸರ್ಕಾರ ಮಾಡುತ್ತಿದೆ. 
 ಬಲಾತ್ಕಾರ ಆರೋಪಿ ರಮೇಶ್ ಪದೇ ಪದೇ ಗೃಹ ಮಂತ್ರಿ ಭೆಟ್ಟಿ ಮಾಡಿದ್ದೇಕೆ? ಡಿಎನ್‍ಎ ಪರೀಕ್ಷೆ ಏಕೆ ನಡೆದಿಲ್ಲ? ಇವೆಲ್ಲದರ ಕುರಿತು ತನಿಖೆಯಾಗಬೇಕು. ಅಲ್ಲದೆ ತಕ್ಷಣವೇ ಆರೋಪಿಯನ್ನು ಬಂಧಿಸಿ ಮಹಿಳೆಗೆ ನ್ಯಾಯ ಒದಗಿಸುವ ಕಾರ್ಯವಾಗಬೇಕೆಂದು ಉಮಾಶ್ರೀ ಹೇಳಿದರು.
 ಕಾಂಗ್ರೆಸ್ ಮುಖಂಡರಾದ ಶಂಕರ ಜಾಲಿಗಿಡದ, ನೀಲಕಂಠ ಮುತ್ತೂರ, ಸಂಗಪ್ಪ ಕುಂದಗೋಳ, ಲಕ್ಷ್ಮಣ ದೇಸಾರಟ್ಟಿ, ರಾಜು ಭದ್ರನ್ನವರ ಉಪಸ್ಥಿತರಿದ್ದರು.