*ರಬಕವಿ-ಬನಹಟ್ಟಿ: ಕೊರೊನಾ ಚಿಕಿತ್ಸಾ ಘಟಕ ಉದ್ಘಾಟನೆ*
-ವರದಿ-ಮಲ್ಲಿಕಾರ್ಜುನ ತುಂಗಳ. ಮುಖ್ಯ ವರದಿಗಾರರು,ಬಾಗಲಕೋಟೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಮುದಾಯ ಆಸ್ಪತ್ರೆಯಲ್ಲಿ ತುರ್ತು ಸೇವೆಗೆಂದು ೬ ಆಕ್ಸಿಜನ್ ಕನ್ಸನ್‌ಟ್ರೇಟರ್ ಹೊಂದಿದ ಕೊರೊನಾ ಪೀಡಿತರ ಕೋಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಉದ್ಘಾಟಿಸಿದರು.

 ಬುಧವಾರ ಸಂಜೆ ಸರ್ಕಾರಿ ಆಸ್ಪತ್ರೆಗೆ ಭೆಟ್ಟಿ ನೀಡಿ ಉದ್ಘಾಟಿಸಿ ಮಾತನಾಡಿ, ಸದ್ಯವೇ ಮತ್ತಷ್ಟು ಆಕ್ಸಿಜನ್ ಕನ್ಸನ್‌ಟ್ರೇಟರ್ ಒದಗಿಸುವ ಮೂಲಕ ಕೋರೊನಾ ಪೀಡಿತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸ್ಥಳೀಯ ಆಸ್ಪತ್ರೆ ಕಾರ್ಯನಿರ್ವಹಣೆಯಾಗಲಿದೆ ಎಂದರು.

ನೂತನ ತಾಲೂಕಾಗಿರುವ ಕಾರಣ ಆಸ್ಪತ್ರೆ ಮೇಲ್ದರ್ಜೆಗೇರಲು ವಿಳಂಬವಾಗುತ್ತಿದೆ. ಶೀಘ್ರವೇ ೫೦ ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವದೆಂದರು. ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣ ಕ್ರಮೇಣ ಇಳಿಮುಖದತ್ತ ಸಾಗುತ್ತಿದೆ. ೨೩ನೇ ತಾರೀಖಿನ ನಂತರ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಜಿಲ್ಲೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಚರ್ಚಿಸಲಾಗುವದೆಂದರು.ಬ್ಲಾಕ್ ಫಂಗಸ್ ರೋಗವು ಕೋವಿಡ್ ಸಂದರ್ಭದಲ್ಲಿನ ಮಧುಮೇಹ ಕಾಯಿಲೆ ಹಾಗು ಸ್ಟೆರಾಯ್ಡ್ ಔಷಧಿಯಿಂದ ಬರುತ್ತಿದೆ. 

ಈ ರೋಗಿಗಳಿಗೆಂದೇ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಿದ್ದು, ಜಿಲ್ಲೆಯಲ್ಲಿ ಕಂಡು ಬರುವ ರೋಗಿಗಳನ್ನು ಅಲ್ಲಿಗೆ ಕಳಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ ಸಂಜಯ ಇಂಗಳೆ, ತಾಲೂಕಾ ವೈದ್ಯಾಧಿಕಾರಿ ಗೌಬುಸಾಬ ಗಲಗಲಿ ಸೇರಿದಂತೆ ಅನೇಕರಿದ್ದರು.