*ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕಲಾವಿದ *ಮಲಿಕ್‌ಸಾಬ್ ಹಣಗಂಡಿ* ಇನ್ನಿಲ್ಲ.
ಹಿಂದು ಪೌರಾಣಿಕ ನಾಟಕಗಳನ್ನು ಸ್ವತಃ ಬರೆದು *ಹಿಂದು-ಮುಸ್ಲಿಂ ಭಾವೈಕ್ಯತೆ* ಸಂಕೇತ ಸಾರಿದ ಹಿರಿಯ ರಂಗಭೂಮಿ ಕಲಾವಿದ, ೨೦೧೦ ರಲ್ಲಿ ಬಿಎಸ್‌ವೈ ಮುಖ್ಯಮಂತ್ರಿ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮಲಿಕ್‌ಸಾಬ್ ಹಣಗಂಡಿ(೮೬) ಗುರುವಾರ ವಯೋಸಹಜ ಕಾಯಿಲೆಯಿಂದ ನಿಧನರಾದರು.

ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯವರಾದ ಮಲಿಕ್ ಸಾಬ್
ಬಾಲ್ಯದಿಂದಲೂ ನಾಟಕದ ಗೀಳು ಹಚ್ಚಿಕೊಂಡಿದ್ದರು. ಆತನ ತಂದೆ ಖುದಾಭಕ್ಷ ಅವರು ಸ್ಥಾಪಿಸಿದ ಶತಮಾನದ ಇತಿಹಾಸ ಹೊಂದಿರುವ *ಗಜಾನನ ಜಾನಪದ ನಾಟ್ಯ ಮಂಡಳಿ* ಯ ರುವಾರಿಯಾಗಿದ್ದರು. 

*ದೀಪಾವಳಿ* ನಾಟಕದಲ್ಲಿನ *ಅಶೋಕ* ಪಾತ್ರದಿಂದ ಇದೇ ಹೆಸರಿನಿಂದ ಪ್ರಚಲಿತರಾಗಿ *ಆದರ್ಶ ಪ್ರೇಮ, ದೇವ ಗೆದ್ದ ಮಾನವ, ಮೂರು ದಿನದ ಸಂತೆ* ಸೇರಿದಂತೆ ಅನೇಕ ಬಯಲಾಟಗಳಿಂದ ಪ್ರಸಿದ್ಧಿ ಪಡೆದಿದ್ದರು. *ಪಿ.ಬಿ. ಧುತ್ತರಗಿ* ರಚಿತ *ಸಂಪತ್ತಿಗೆ ಸವಾಲ್‌* ನ್ನು ಮೊದಲ ಬಾರಿಗೆ ಬಯಲಾಟದ ಮೂಲಕ *ಬದ್ರಿ* ಪಾತ್ರ ಜೀವ ತುಂಬಿ ಕರ್ನಾಟಕ, ಮಹಾರಾಷ್ಟ್ರದ ಮೂಲೆ ಮೂಲೆಯಲ್ಲಿ ಅಭಿನಯಿಸಿದ ಹಿರಿಮೆ ಇವರದಾಗಿತ್ತು.

ಕಲಾವಿದರಾಗಿ ಕನ್ನಡಕ್ಕಾಗಿ ಜೀವ ಸವಿಸಿದ ಹಿರಿಯ ಕಲಾವಿದ ಮಲಿಕ್‌ಸಾಬ್ ಜೀವನುದ್ದಕ್ಕೂ ಬಡತನದಲ್ಲಿಯೇ ಬದುಕು ಸಾಗಿಸಿದವರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವಿದೆ.

ಇವರ ಅಗಲಿಕೆಗೆ ಬಸವ ಸಂಪದ ಬಳಗ, ಕವಿ-ಬನ ಸಾಹಿತ್ಯ ವೇದಿಕೆ, ಮಕ್ಕಳ ಸಂಗಮ ಹಾಗು ವಾತ್ಸಲ್ಯ ವಿಚಾರ ವೇದಿಕೆ ಶೃದ್ಧಾಂಜಲಿ ಸಲ್ಲಿಸಿವೆ.

ವರದಿ : ಮಲ್ಲಿಕಾರ್ಜುನ ತುಂಗಳ.