ವರದಿ : ವಿಜಯ ವಾಜಂತ್ರಿ

ತೇರದಾಳದ ಅಂಬೇಡ್ಕರ ಸರ್ಕಲ್ ಹತ್ತಿರ ಚರಂಡಿ ತುಂಬಿರುವುದನ್ನು ಅಲ್ಲಿನ ಸಾರ್ವಜನಿಕರು ತೋರಿಸುತ್ತಿರುವುದು.


ತುಂಬಿ ನಿಂತ ಚರಂಡಿ ಸ್ವಚ್ಚತೆಗೆ ಇಲ್ಲಿ ಆದ್ಯೆತೆ ಇಲ್ಲ...


ತೇರದಾಳ : ಪಟ್ಟಣದ ಅಂಬೇಡ್ಕರ ಸರ್ಕಲ್ ಹತ್ತಿರ ಚರಂಡಿ ತುಂಬಿಕೊಂಡು ನಿಂತು ಅಲ್ಲಿನ ನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

  ಪಟ್ಟಣದ ಎಲ್ಲ ಚರಂಡಿ ನೀರು ಈ ಚರಂಡಿ ಮುಖಾಂತರವಾಗಿ ಸಾಗಿ ಮುಂದಿರುವ ಹಳ್ಳವನ್ನು ಸೇರುತ್ತದೆ. ಆದರೆ ಹಲವಾರು ಸಮಸ್ಯೆಗಳಿಂದ ಚರಂಡಿ ನೀರು ಹರಿದು ಮುಂದೆ ಹೋಗದೆ ಅಲ್ಲಿಯೇ ನಿಂತು ಅದರಲ್ಲಿ ಸೊಳ್ಳೆಗಳು ಬೆಳೆದು ಅಲ್ಲಿನ ನಿವಾಸಿಗಳನ್ನು ರಾತ್ರಿ ನಿದ್ದೆ ಮಾಡಲು ಸಹ ಬಿಡುತಿಲ್ಲವೆಂದು ನೊಂದ ನಿವಾಸಿಗಳು ದೂರಿದ್ದಾರೆ. ಚರಂಡಿ ನೀರಿನಲ್ಲಿ ನೀರು ಸರಬರಾಜು ಪೈಪಗಳು ಸಹ ಇವೆ. ಅವುಗಳು ಅಲ್ಲಲ್ಲಿ ಒಡೆದು ಅದರಲ್ಲಿ ಚರಂಡಿ ನೀರು ಸೇರಿ ಚರಂಡಿ ನೀರು ಸರಬರಾಜು ನಳಗಳಲ್ಲಿ ಬರುತ್ತಿದೆ. ಇದರಿಂದ ನಿವಾಸಿಗಳು ಚರಂಡಿ ನೀರನ್ನೆ ಕುಡಿಯಬೇಕಾಗಿದೆ. ಈ ಕುರಿತು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆಗಳನ್ನು ಹೇಳಿದರೆ ಕ್ಯಾರೆ ಅನ್ನುತ್ತಿಲ್ಲ. 
   ಭಯಾನಕ ಮಹಾಮಾರಿ ಕೋವಿಡ್-19ರ ಸಂದರ್ಭದಲ್ಲಿಯೂ ಸಹ ಅಧಿಕಾರಿಗಳು ಈ ತುಂಬಿರುವ ಚರಂಡಿಗಳನ್ನು ಸ್ವಚ್ಚ ಮಾಡುತಿಲ್ಲ ನಮಗೆ ಈ ಜೀವನ ಸಾಕಾಗಿ ಹೋಗಿದೆ. ವಾರ್ಡಗಳನ್ನು ಸ್ವಚ್ಚವಾಗಿಡಬೇಕು ಎಂದು ಮಾಧ್ಯಮಗಳಲ್ಲಿ ದಿನಾಲು ಬರುತ್ತಿದ್ದರೆ ವಾಸಿಸುವ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಅವರು ನೊಂದುಕೊಂಡು ಪತ್ರಿಕೆಗೆ ತಿಳಿಸಿದರು. ಕೊಳಚೆ ಪ್ರದೇಶದಲ್ಲಿ ಬಡವರು, ಕೂಲಿಕಾರ್ಮಿಕರು ವಾಸಿಸುತ್ತಿದ್ದಾರೆ. ದಿನಾಲು ಕೆಲಸಕ್ಕೆ ಹೋಗದಿದ್ದರೆ ಸಂಜೆಯ ಊಟಕ್ಕೆ ಗತಿಯಿಲ್ಲ. ಸೋಂಕು ಹೆಚ್ಚಾಗುತ್ತಿದ್ದಂತೆ ಅದನ್ನು ಹತೋಟಿಗೆ ತರಲು ಸರಕಾರ ಲಾಕ್‍ಡೌನ್ ಜಾರಿ ಮಾಡಿದೆ. ಸೋಂಕಿನ ಪ್ರಮಾಣ ಹೆಚ್ಚಾಗುತಿದ್ದಂತೆ ಸಾವಿನ ಪ್ರಮಾಣವು ಸಹ ಹೆಚ್ಚಾಗುತ್ತಿದೆ ಇದಕ್ಕೆ ಜನ ಭಯ ಭೀತರಾಗಿದ್ದಾರೆ. ಕೊಳಚೆ ಪ್ರದೇಶ ಕೊಳಚೆ ಪ್ರದೇಶವಾಗಿಯೇ ಉಳಿಯುತ್ತಿದೆ. ಇನ್ನಾದರೂ ಅಧಿಕಾರಿಗಳು ತುಂಬಿ ನಿಂತ ಚರಂಡಿಯನ್ನು ಸ್ವಚ್ಚ ಮಾಡಬೇಕು. ಇಲ್ಲವಾದರೆ ಕೋವಿಡ್ ನಿಯಮಗಳನ್ನು ಮರೆತು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸುನೀಲ ಹಟ್ಟೆನ್ನವರ, ಪ್ರವೀಣ ಸುತಾರ, ರಾಜು ದೊಡಮನಿ, ರಮೇಶ ಭಜಂತ್ರಿ ಸೇರಿದಂತೆ ಇನ್ನಿತರರು ತಿಳಿಸಿದ್ದಾರೆ.