ನ್ಯಾಯಾಂಗದ ಬಗ್ಗೆ ಸಿ.ಟಿ.ರವಿ, ಸದಾನಂದ ಗೌಡ ಟೀಕೆ: ಮಾತಿನ ಮೇಲೆ ನಿಗಾ ಇರಲಿ ಎಂದ ಎ.ಎ.ಬಿ ಅಧ್ಯಕ್ಷರು
"ನ್ಯಾಯಾಧೀಶರು ಸರ್ವಜ್ಞರಲ್ಲ," ಎಂದು ಹೇಳಿಕೆ ಕೊಟ್ಟ ಬಿ.ಜೆ.ಪಿ ಮುಖಂಡ ಸಿ.ಟಿ.ರವಿ ಹಾಗೂ "ನಾಳೆಯೇ ಲಸಿಕೆ ಕೊಡಬೇಕೆಂದು ಕೋರ್ಟ್ ಹೇಳುತ್ತೆ. ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?," ಎಂದು ಹೇಳಿದ ಕೇಂದ್ರ ಮಂತ್ರಿ ಸದಾನಂದ ಗೌಡ ಅವರ ಬಗ್ಗೆ, "ಎ. ಪಿ. ರಂಗನಾಥ್, ಅಧ್ಯಕ್ಷರು, ಬೆಂಗಳೂರು ವಕೀಲರ ಸಂಘ," ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

"ನಾಗರಿಕರ ಬದುಕುವ ಹಕ್ಕನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಉನ್ನತ ನ್ಯಾಯಾಲಯಗಳು ಸರಿಯಾದ ಹೆಜ್ಜೆಗಳನ್ನು ಇರಿಸಿದೆ. ಇದನ್ನು ಸರಿಯಾಗಿ ಗ್ರಹಿಸದೆ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಮತ್ತು ಮಾಜಿ ಸಚಿವ ಸಿ. ಟಿ. ರವಿ ಅವರು ನೀಡಿರುವ ಹೇಳಿಕೆಗಳು ಖಂಡನಾರ್ಹವಾಗಿವೆ. ಇಂತಹ ಹೇಳಿಕೆಗಳನ್ನು ನ್ಯಾಯಾಧೀಶರ ಆತ್ಮ ಸ್ಥೈರ್ಯವನ್ನು ಕೆಡಸುವ ಉದ್ದೇಶದಿಂದ ಹೇಳಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜಕೀಯ ನಾಯಕರು ತಮ್ಮ ಮಾತಿನ ಮೇಲೆ ನಿಗಾ ಇಟ್ಟಿರ ಬೇಕು. ಇಂತಹ ಕೀಳು ಮಟ್ಟದ ಮಾತುಗಳು ಕೆಟ್ಟ ಪರಂಪರೆಯನ್ನು ಬೆಳೆಸುತ್ತದೆ," ಎಂದಿದ್ದಾರೆ ರಂಗನಾಥ್. 

ಬಿ.ಜೆ.ಪಿ ನಾಯಕರ ಮಾತಿಗೆ ಕಾರಣವನ್ನು ಅವರು ಹೇಳಿದ್ದಾರೆ. "ತನ್ನ ಪಾಲಿನ ಶಾಸನಬದ್ದ ಕೆಲಸವನ್ನು ಅರಿಯದೆ ಮೈಮರೆತ ಕಾರ್ಯಾಂಗ ಕ್ಕೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ ಮಧ್ಯಂತರ ಆದೇಶಗಳು ಮುಜುಗರ ತಂದಿರುವುದು ಸ್ಪಷ್ಟವಾಗಿ ತಿಳಿದಿರುವ ಸಂಗತಿ. ಕೋವಿಡ್ ಎರಡನೇ ಅಲೆ ಇಡೀ ದೇಶದ ನಾಗರೀಕರನ್ನು ಕಂಗೆಡಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನೇನು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿತ್ತೋ ಅವುಗಳನ್ನೆಲ್ಲ ಕೈಗೊಳ್ಳುವ ಬದಲು ಕಾಲವನ್ನು ವ್ಯರ್ಥಗೊಳಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ," ಎಂದಿದ್ದಾರೆ.