ತೇರದಾಳದ ಪೌರ ಕಾರ್ಮಿಕರು ಕಳೆದ 8 ತಿಂಗಳಿಂದ ವೇತನ ನೀಡಿಲ್ಲವೆಂದು ಪುರಸಭೆಯ ಬಯಲು ರಂಗ ಮಂದಿರದಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ತೇರದಾಳ ಪುರಸಭೆ ಪೌರ ಕಾರ್ಮಿಕರಿಗೆ ಎಂಟು ತಿಂಗಳಿಂದ ವೇತನ ಇಲ್ಲ
ಅಧಿಕಾರಿಗಳ ಬೇಜವಾಬ್ದಾರಿಯಿಂದ ಪೌರ ಕಾರ್ಮಿಕರು ಉಪವಾಸ ಇರಬೇಕಾಗಿದೆ
ತೇರದಾಳ : ಪಟ್ಟಣದ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ನೇರ ಪಾವತಿ ಪೌರ ಕಾರ್ಮಿಕರಿಗೆ ಕಳೆದ ಎಂಟು ತಿಂಗಳಿಂದ ವೇತನ ನೀಡಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು.
ಪುರಸಭೆಯ ಬಯಲು ರಂಗ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅಧಿಕಾರಿಗಳಿಂದ ತಮಗೆ ಆಗುತ್ತಿರುವ ಅನ್ಯಾಯವನ್ನು ಒಂದೊಂದಾಗಿ ಹೇಳುತ್ತ ಅವರು ಸರಕಾರ ಪೌರಕಾರ್ಮಿಕರಿಗೆ ದಿನಾಲು ಬೆಳಿಗ್ಗೆ ಉಪಹಾರ ಕೊಡಬೇಕು ಎಂದು ಆದೇಶವಿದ್ದರೂ ಅಧಿಕಾರಿಗಳು ಕಳೆದ ಐದು ತಿಂಗಳಿಂದ ಉಪಹಾರವನ್ನು ಕೊಟ್ಟಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಅನುದಾನ ಬಂದಿಲ್ಲವೆಂದು ಹೇಳುತ್ತಾರೆ. ಕಳೆದ 22ತಿಂಗಳಿಂದ ಇಎಫ್ ಹಾಗೂ ಪಿಎಫ್‍ನ್ನು ಕಟ್ಟಿರುವುದಿಲ್ಲ, ಈ ವರ್ಷದಲ್ಲಿ ಬಟ್ಟೆಗಳನ್ನು ನಾವೇ ಹೊಲಿಸಿ ಕೊಂಡಿದ್ದೇವೆ ಎಂದು ಅವರು ಪತ್ರಿಕೆಗೆ ಹೇಳಿದರು. ಈ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇವಲ ಒಂದು ಮಾಸ್ಕ್ ಹಾಗೂ ಒಂದು ಜೊತೆ ಹ್ಯಾಂಡ್‍ಗ್ಲೌಸ್ ಕೊಟ್ಟು ಇನ್ನು ನಾಲ್ಕು ತಿಂಗಳವರೆಗೆ ಮಾಸ್ಕ್‍ನ್ನು ಕೇಳುವಂತಿಲ್ಲವೆಂದು ಹೇಳುತ್ತಾರೆ. ನಾವು ಚರಂಡಿಯ ನೀರಲ್ಲಿ ಕೈಹಾಕಿದಾಗ ಅಥವಾ ಮಾಸ್ಕ್‍ನ್ನು ತೊಳೆದಾಗ ಅವು ಹರಿದು ಹಾಳಾಗಿ ಹೋಗುತ್ತವೆ ಆಗ ನಾವೇನು ಮಾಡಬೇಕು ಮತ್ತು ನಾಲ್ಕು ತಿಂಗಳವರೆಗೆ ಹೇಗೆ ಅವುಗಳ ರಕ್ಷಣೆ ಮಾಡಬೇಕು. ಹಾಗೂ ಸ್ಯಾನಿಟೈಸರ್‍ನ್ನು ಇವರು ಕೊಟ್ಟಿಲ್ಲ ಎಂದು ಒಬ್ಬೊಬ್ಬರಾಗಿ ತಮ್ಮ ಒಂದೊಂದು ಸಮಸ್ಯೆಯನ್ನು ತಿಳಿಸಿದರು.
ಈಂತಹ ಭಯಾನಕ ವಾತಾವರಣದಲ್ಲಿ ಅಂಗಡಿಗಳಲ್ಲಿ ಉದ್ರಿ ಕಿರಾಣಿ ಕೇಳಲು ಹೋದರೆ ಉದ್ರಿ ಕೊಡುವುದನ್ನು ನಿಲ್ಲಿಸಿದ್ದಾರೆ. ಈಗ ನಮ್ಮ ಕುಟುಂಬದ ಸದಸ್ಯರಿಗೆ ಅರೋಗ್ಯ ತಪ್ಪಿದಾಗ ನಾವು ಯಾರ ಹತ್ತಿರ ಹಣವನ್ನು ಕೇಳೋಣ. ಈಗ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಯಾರು ನಮಗೆ ಹಣ ಕೊಡುವುದಿಲ್ಲ. ನಮ್ಮೆಲ್ಲ ಬಟ್ಟೆಗಳು ಹರಿದು ಹೋಗಿವೆ. ಹರಿದ ಬಟ್ಟೆಗಳನ್ನು ಹಾಕಿಕೊಂಡು ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಮ್ಮ ಹರುಕಲು ಬಟ್ಟೆಗಳನ್ನು ತೋರಿಸಿದರು. ನಾವು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕೆಲಸವನ್ನು ಮಾಡಿ ಮನೆಗೆ ಬಂದು ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾತ್ರಿ ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ. ಬೇಗನೆ ವೇತನವನ್ನು ಪಾವತಿಸದಿದ್ದರೆ ನಾವು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಘುನಾಥ ಗೋಟಡಕಿ, ಶಂಭು ಮಾಸ್ತಿ, ಸಂಜು ಹಟ್ಟೆನ್ನವರ, ಶೋಭಾ ಮಾಸ್ತಿ, ಸಾವಿತ್ರಿ ಸಿಂಗೆ, ಪೀರಪ್ಪ ಗೋಟಡಕಿ, ನಾಗಪ್ಪ ಇಮೆಡೆನ್ನವರ, ಪಾಪಣ್ಣ ಬೋದೆನ್ನವರ ಸೇರಿದಂತೆ 28 ಜನ ನೇರ ಪಾವತಿ ಕಾರ್ಮಿಕರು ತಿಳಿಸಿದ್ದಾರೆ.

Social Plugin