ತೇರದಾಳ ಶ್ರೀಗುರು ಬ್ರಹ್ಮಾನಂದ ಆಶ್ರಮದಲ್ಲಿ ಕೋವಿಡ್-19 ಆರೋಗ್ಯ ಕಿಟ್ ವಿತರಣಾ ಸಮಾರಂಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು.
ಅಮಾಯಕರ ಜೀವ ಉಳಿಸಿದ ಪುಣ್ಯ ವಾರಿಯರ್ಸ್ ಗೆ ಸಲ್ಲುತ್ತದೆ.
ತೇರದಾಳ : ಕೊರೊನಾ ನಿರ್ಮೂಲನಾ ಮಾಡುವಲ್ಲಿ ವಾರಿಯರ್ಸ್ ಪಾತ್ರ ಬಹಳಷ್ಟಿದೆ. ಭಯಾನಕ ವಾತಾವರಣದಲ್ಲಿ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ನಿಮ್ಮ ಕರ್ತವ್ಯ. ಕೊರೊನಾ ವೈರಸ್ ಜೊತೆ ಒಂದು ಯುದ್ಧ (ಹೋರಾಟ)ನಡೆದಿದೆ. ಆ ಯುದ್ಧದಲ್ಲಿ ಮುಂದಿನ ಸಾಲಿನ ಸೈನಿಕರು ಆಶಾ ಕಾರ್ಯಕರ್ತರು, ಅಂಗನವಾಡಿ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಪ್ರಾಮಾಣಿಕವಾಗಿ ಕರ್ತವ್ಯವನ್ನು ಮಾಡುವುದರಿಂದ ಅಮಾಯಕರ ಜೀವ ಉಳಿಸಿದ ಪುಣ್ಯ ನಿಮಗೆ ಸಿಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಶ್ರೀಗುರು ಬ್ರಹ್ಮಾನಂದ ಆಶ್ರಮದಲ್ಲಿ ನಡೆದ ಕೋವಿಡ್-19 ಆರೋಗ್ಯ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ನಿಮ್ಮ ರಕ್ಷಣೆ ಜೊತೆಗೆ ಅಮಾಯಕರ ರಕ್ಷಣೆ ಮಾಡಬೇಕು. ಕೊರೊನಾ ವೈರಾಣುವಿನ ಅಬ್ಬರ ಹೆಚ್ಚಾದಂತೆ ಸೋಂಕಿನ ಪ್ರಮಾಣ ಹೆಚ್ಚಾಗುವುದರ ಜೊತೆಗೆ ಸಾವಿನ ಪ್ರಮಾಣವು ಸಹ ಹೆಚ್ಚಾಗುತ್ತದೆ. ಕೊರೊನಾ ವೈರಾಣು ಒಂದು ಬೆಂಕಿ ಚಂಡು ಇದ್ದ ಹಾಗೇ. ಅದನ್ನು ಮುಟ್ಟಲು ಯಾರು ಹುಚ್ಚ ಸಾಹಸದ ಕೆಲಸ ಮಾಡಬೇಡಿ. ಕುಟುಂಬದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವಂತ ದಯನೀಯ ಸ್ಥಿತಿಯಲ್ಲಿ ನಿಮ್ಮ ಪಾತ್ರ ಮಹತ್ವದ್ದು. 15ದಿನಗಳವರೆಗೆ ಮನೆಯಲ್ಲಿಯೇ ಇರುವುದು. ಮದುವೆಗಳಲ್ಲಿ ಸರಕಾರದ ನಿಯಮಗಳಂತೆ ಜನರು ಸೇರಬೇಕು. ಜನರಿಗೆ ಭಯಾನಕವಾದ ಸೋಂಕಿನ ಬಗ್ಗೆ ತಿಳಿಸಿ ಕೋವಿಡ್ ಆಸ್ಪತ್ರೆಗೆ ಕಳುಹಿಸಿ ವ್ಯಾಪಕವಾಗಿ ಸೋಂಕು ಹರಡುವುದನ್ನು ತಡೆಯಬೇಕು. ನಮ್ಮ ಬೇಜವಾಬ್ದಾರಿಯಿಂದ ಸೋಂಕು ಹರಡಲು ನಾವೇ ಕಾರಣರಾಗುತ್ತಿದ್ದೇವೆ. ಸರಿಯಾಗಿ ಸರ್ವೆ ಮಾಡಿ ಸೋಂಕಿತರಿಗೆ ಆರೋಗ್ಯ ಕಿಟ್ ವಿತರಿಸುವ ಕಾರ್ಯ ಆಗಬೇಕು. ಈ ತಂಡದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿ, ಆರೋಗ್ಯ ಇಲಾಖೆಯ ಒಬ್ಬ ಸಿಬ್ಬಂದಿ ಇರುತ್ತಾರೆ ಎಂದರು.
ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ ಮಾತನಾಡಿ ಇಲ್ಲಿಯವರೆಗೆ ತೇರದಾಳ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 500 ಕೋವಿಡ್ ಆರೋಗ್ಯ ಕಿಟ್‍ಗಳು ಬಂದಿವೆ. ಇಲ್ಲಿಯವರೆಗೆ 159 ಪಾಸಿಟೀವ್ ಪ್ರಕರಣಗಳಿವೆ. ಅವುಗಳಲ್ಲಿ 87 ಪ್ರಕರಣಗಳು ನೆಗಟೀವ ಆಗಿವೆ. ಈಗಾಗಲೇ 324 ಕೋವಿಡ್ ಆರೋಗ್ಯ ಕಿಟ್‍ಗಳನ್ನು ವಿತರಿಸಲಾಗಿದೆ ಎಂದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ಹಾಗೂ ಸಿಪಿಐ ಜೆ. ಕರುಣೇಶಗೌಡ ಮಾತನಾಡಿ ಈ ಕಿಟ್‍ನ್ನು ಎಲ್ಲರಿಗೂ ಹಂಚುವಂತಿಲ್ಲ. ಯಾರಿಗೆ ರೋಗದ ಲಕ್ಷಣಗಳಿವೆ ಅವರಿಗೆ ಮಾತ್ರ ಕೊಡಬೇಕು. ನೆಗಡಿ, ಕೆಮ್ಮು ಬಂದಿರುವ ವ್ಯಕ್ತಿಗಳು ಔಷಧ ಅಂಗಡಿಗಳಿಗೆ ಹೋಗಿ ಮಾತ್ರೆಗಳನ್ನು ತಗೆದುಕೊಳ್ಳಬಾರದು. ಪರೀಕ್ಷೆ ಮಾಡಿಕೊಂಡು ಮುಂದಿನ ಚಿಕಿತ್ಸೆ ಪಡೆಯಬೇಕು ಎಂದರು.
ಪಿಎಸ್‍ಐ ವಿಜಯ ಕಾಂಬಳೆ, ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ, ಹನಮಂತ ಮಾಳಗಿ, ಪುರಸಭೆ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು. ಪುರಸಭೆ ಆರೋಗ್ಯ ಸಹಾಯಕಿ ಭಾಗ್ಯಶ್ರೀ ಪಾಟೀಲ ನಿರೂಪಿಸಿ ವಂದಿಸಿದರು.

Social Plugin