ವರದಿ : ವಿಜಯ ವಾಜಂತ್ರಿ

ತೇರದಾಳದ ವಾರ್ಡನಂ 22ರಲ್ಲಿನ ಮಹಿಳಾ ಶೌಚಾಲಯದ ನೀರು ಹೊಲಗಳಿಗೆ ಹೋಗುತ್ತಿರುವುದು.

ಮಹಿಳಾ ಶೌಚಾಲಯದ ನೀರು ಹೊಲಗಳಿಗೆ -ರೈತರ ಅಳಲು

ತೇರದಾಳ : ಪಟ್ಟಣದ ವಾರ್ಡ ನಂ 22ರಲ್ಲಿನ ಮಹಿಳಾ ಶೌಚಾಲಯದ ನೀರು ಶೌಚಾಲಯದ ಪಕ್ಕದಲ್ಲಿಯೇ ಬಿದ್ದು ಪಕ್ಕದ ಹೊಲಗಳಿಗೆ ಹೋಗಿ ತೊಂದರೆಯನ್ನುಂಟು ಮಾಡುತ್ತಿದೆ ಎಂದು ರೈತರಾದ ವಿಠ್ಠಲ ಮುದಕನ್ನವರ ಹಾಗೂ ಬಸವರಾಜ ಮುದಕನ್ನವರ ದೂರಿದ್ದಾರೆ.

  ವಾರ್ಡನಂ 3,22 ಮತ್ತು20 ರಲ್ಲಿನ ಮಹಿಳೆಯರಿಗಾಗಿ ಕಟ್ಟಿಸಿದ ಶೌಚಾಲಯ. ಈ ಮಹಿಳಾ ಶೌಚಾಲಯದ ತಿಳಿ ನೀರು ಹೋಗಲು ಜೋಡಿಸಲಾದ ಪೈಪ ಕಿತ್ತು ಹೋಗಿದೆ. ಅದನ್ನು ಸರಿ ಪಡಿಸುವಂತೆ ರೈತರು ಸಾಕಷ್ಟು ಬಾರಿ ಸಂಬಂದಿಸಿದ ಪುರಸಭೆ ಅಧಿಕಾರಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆ ಅಧ್ಯಕ್ಷರ ವಾರ್ಡಿನಲ್ಲಿರುವ ಈ ಶೌಚಾಲಯಕ್ಕೆ ದುರಸ್ತಿ ಭಾಗ್ಯ ಬಂದಿಲ್ಲ. ರೈತರು ಸ್ವತಃ ತಾವೇ ಪುರಸಭೆಗೆ ಹೋಗಿ ಪೈಪನ್ನು ಕೊಡಿ ನಾವೇ ಅದನ್ನು ಜೋಡಿಸಿಕೊಳ್ಳುತ್ತೇವೆ ಎಂದರು ಕ್ಯಾರೆ ಎನ್ನದ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಎರಡು ಫೋಟ್ ಪೈಪನ್ನು ತಂದು ಜೋಡಿಸಿದರೆ ಅದು ಅಲ್ಲಿಯೇ ಇರುವ ಚರಂಡಿಯಲ್ಲಿ ನೀರು ಹೋಗುತ್ತಿದೆ. ಹಾಗೂ ಅಲ್ಲಿರುವ ಚರಂಡಿ ತುಂಬಿಕೊಂಡಿದ್ದರು ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸದ್ದನ್ನು ನೋಡಿ ರೈತರು ಪುರಸಭೆ ಅಧಿಕಾರಿಗಳ ಮೇಲೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

  ಚುನಾಯಿತ ಪ್ರತಿನಿಧಿಗಳಿಗೆ ಸಾಕಷ್ಟು ಸಾರಿ ಹೇಳಲಾಗಿದೆ ಅದಕ್ಕೆ ಅವರು ದುರಸ್ತಿ ಕಾರ್ಯ ಮಾಡಿಸುತ್ತೇವೆ ಎಂದು ಹೇಳುತ್ತಾರೆ. ಕಳೆದ ಮೂರುನಾಲ್ಕು ತಿಂಗಳಿಂದ ಹೇಳುತ್ತಿದ್ದರು ನಮ್ಮ ಗೋಳನ್ನು ಕೇಳುತ್ತಿಲ್ಲವೆಂದು ಬಸವರಾಜ ಮುದಕನ್ನವರ ತಮ್ಮ ಅಳಲನ್ನು ಪತ್ರಿಕೆ ಮುಂದೆ ತೋಡಿಕೊಂಡರು.