ವರದಿ : ವಿಜಯ ವಾಜಂತ್ರಿ
ತೇರದಾಳದ ಸಿದ್ಧೇಶ್ವರ ಗಲ್ಲಿಯ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಸಭಾಭವನದಲ್ಲಿ ಚಿಮ್ಮಡ ವಿರಕ್ತಮಠದ ಶ್ರೀಪ್ರಭು ಮಹಾಸ್ವಾಮಿಗಳು, ಜಿಲ್ಲಾ ಕಸಾಪ ಅಧ್ಯಕ್ಷ ಸ್ತಾನಕ್ಕೆ ಸ್ಪರ್ಧಿಸಿರುವ ಶಿವಾನಂದ ಶೆಲ್ಲಿಕೇರಿಯವರು ಮತದಾರರೊಂದಿಗಿದ್ದಾರೆ.

ತೇರದಾಳದಲ್ಲಿ ಶಿವಾನಂದ ಶೆಲ್ಲಿಕೇರಿ ಮತಯಾಚನೆ
ಕನ್ನಡವನ್ನು ಕಟ್ಟುವ ಕೈಂಕರ್ಯಕ್ಕೆ ಸದಾ ಸಿದ್ಧ : ಶೆಲ್ಲಿಕೇರಿ
ತೇರದಾಳ : ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವುದು. ಯುವ ಬರಹಗಾರರನ್ನು ಪ್ರೋತ್ಸಾಹಿಸುವುದು. ಸಾಹಿತ್ಯಿಕ ಚಟುವಟಿಕೆಗಳಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡುವುದು ಸೇರಿದಂತೆ ಕನ್ನಡವನ್ನು ಕಟ್ಟುವ ಕೈಂಕರ್ಯದಲ್ಲಿ ನಿರಂತರವಾಗಿ ಕೆಲಸ ಮಡುವ ಮಹದಾಸೆ ಹೊಂದಿರುವ ತಮಗೆ ಎಲ್ಲರೂ ಬೆಂಬಲಿಸಿ ಆಶೀರ್ವದಿಸಬೇಕೆಂದು ಬಾಗಲಕೋಟ ಜಿಲ್ಲಾ ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಾನಂದ ಶೆಲ್ಲಿಕೇರಿ ಮನವಿ ಮಾಡಿದರು.
ಇಲ್ಲಿಯ ಸಿದ್ಧೇಶ್ವರ ಗಲ್ಲಿಯ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಸಭಾಭವನದಲ್ಲಿ ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಳೆದ 25ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಒಡನಾಟದಲ್ಲಿರುವ ನನಗೆ ಜಿಲ್ಲೆಯ ಎಲ್ಲ ಭಾಗಗಳ ಸಮಗ್ರ ಪರಿಚಯ ಹೊಂದಿದ್ದೇನೆ. ಸಾಹಿತಿಗಳು, ಕಲಾವಿದರು, ಶಿಕ್ಷಕರು, ಪತ್ರಕರ್ತರ ನಿಕಟ ಸಂಪರ್ಕದಲ್ಲಿದ್ದೇನೆ. ಇಲ್ಲಿಯ ಸಹೃದಯಿ ಕಸಾಪ ಮತದಾರರು ತಾವುಗಳೆಲ್ಲ ಬೆಂಬಲಿಸಿ ಗೆಲ್ಲಿಸಬೇಕೆಂದು ಕೋರಿದರು.
ಸಾನಿಧ್ಯ ವಹಿಸಿದ್ದ ಚಿಮ್ಮಡ ವಿರಕ್ತಮಠದ ಶ್ರೀಪ್ರಭು ಮಹಾಸ್ವಾಮಿಗಳು ಮಾತನಾಡಿ, ನೀವು ಕ್ರಿಯಾಶೀಲರಾಗಿದ್ದೀರಿ. ನಿಮ್ಮ ಬೆಂಬಲಕ್ಕೆ ಸದಾ ನಾವಿದ್ದೇವೆ. ತಾವು ಆಯ್ಕೆಯಾಗಿ ಬಂದು ಎಲ್ಲರ ವಿಶ್ವಾಸ ಗಳಿಸುವಂತೆ ಕಾರ್ಯ ಮಾಡುವುದು ಅವಶ್ಯವಿದೆ. ಕೆಲವರು ಚುನಾವಣೆ ಮುನ್ನ, ಚುನಾವಣೆ ಬಳಿಕ ಒಂದೊಂದು ರೀತಿ ಇರ್ತಾರೆ ಅದು ಬೇಡ ಎಂದು ಮಾರ್ಗದರ್ಶಿ ನುಡಿಗಳಲ್ಲಿ ಹೇಳಿದರು.
ಶ್ರೀಅಲ್ಲಮಪ್ರಭುದೇವರ ದೇವಾಲಯ ಅರ್ಚಕರಾದ ವೇದಮೂರ್ತಿ ಮಗಯ್ಯಾ ಸ್ವಾಮಿಗಳು ತೆಳಗಿನಮನಿ ಅವರು ಮಾತನಾಡಿ ತೇರದಾಳದಲ್ಲಿ ಜಮಖಂಡಿ ತಾಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನ ಮಾಡಿದ ಇತಿಹಾಸವಿದೆ. ಈ ಊರಿನ ಬಗ್ಗೆ, ತಾಲೂಕಿನ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ನಿಮ್ಮ ಬೆಂಬಲಕ್ಕೆ ಸದಾಕಾಲ ಇದ್ದೇವೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಮಾತನಾಡಿ ತೇರದಾಳದಲ್ಲಿಯೂ ಸಾಹಿತ್ಯ ಭವನ ನಿರ್ಮಾಣವಾಗಬೇಕು. ಇಲ್ಲಿಯೂ ಸಾಹಿತ್ಯ ಸಂಘಟನೆಗೆ ಯುವಕರು, ಹಿರಿಯರು ಸಾಕಷ್ಟು ಶ್ರಮಿಸುತಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ಎಂ.ಸಿ.ಕುಂಚಗನೂರ, ಈರಪ್ಪ ಬಾಳಿಕಾಯಿ ಮಾತನಾಡಿ ತೇರದಾಳದಲ್ಲಿ ಕೇವಲ 13ಸದಸ್ಯರಿದ್ದರು. ಮ.ಕೃ.ಮೇಗಾಡಿಯವರು ತೇರದಾಳ ವಲಯ ಕಸಾಪ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾವು ಸೇರಿ ನಗರದಲ್ಲಿ ಶ್ರಮವಹಿಸಿ ಕಾರ್ಯ ಮಾಡಿದ ಫಲವಾಗಿ 200 ಸದಸ್ಯರನ್ನು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 200ಕ್ಕೂ ಹೆಚ್ಚು ಕಸಾಪ ಸದಸ್ಯರನ್ನು ಮಾಡಲಾಗುವುದು. ಮತದಾನ ಕೇಂದ್ರವನ್ನು ತೇರದಾಳದಲ್ಲಿ ಆಗುವಂತೆ ಪ್ರಯತ್ನಿಸಬೇಕೆಂದರು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾ ಅಧ್ಯಕ್ಷ ಮ.ಕೃ.ಮೇಗಾಡಿ, ತೇರದಾಳ ವಲಯ ಅಧ್ಯಕ್ಷ ಜಿ.ಎಂ.ಮೋಪಗಾರ, ಹಿರಿಯರಾದ ಚನ್ನಮಲ್ಲಪ್ಪ ಬಿಜ್ಜರಗಿ, ಅಪ್ಪು ಮಂಗಸೂಳಿ, ಮಲ್ಲಿನಾಥ ಬೋಳಗೊಂಡ, ಮೆಹಬೂಬ ತಹಸೀಲ್ದಾರ್, ಮಾಶೂಮ್ ಇನಾಮದಾರ, ಸುರೇಂದ್ರ ಹಟ್ಟಿ, ನೀಲಕಂಠಪ್ಪ ಜಡಿ, ಮುತ್ತು ವಂಟಗುಡಿ, ಐಟಿಐ ಕಾಲೇಜಿನ ಪ್ರಾಚಾರ್ಯ ಎಲ್.ವಿ.ಹಿಡಕಲ್, ದಯಾನಂದ ಬಿಜ್ಜರಗಿ, ಭೂಪಾಲ ವಾಜಂತ್ರಿ, ನಾವಲಗಿ ಗ್ರಾಮದ ಹಿರಿಯ ಕಲಾವಿದ ಶ್ರೀಶೈಲ ಪಟ್ಟಣಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ ರಾಯಪ್ಪ ಕುಂಬಾರ, ಚನ್ನಯ್ಯ ಮುಕ್ಕಯ್ಯಗೋಳ, ರಮೇಶ ಪಟ್ಟಣಶೆಟ್ಟಿ, ಈಶ್ವರ ಕಿತ್ತೂರ ಸೇರಿದಂತೆ ನೂರಾರು ಮತದಾರರು ಪಾಲ್ಗೊಂಡಿದ್ದರು.