ವರದಿ : ವಿಜಯ ವಾಜಂತ್ರಿ
ತೇರದಾಳ ಪುರಸಭೆ ಹೆಸರಿನಲ್ಲಿ ನಕಲಿ ಸೀಲ್ ತಯಾರಿಸಿ ಪುರಸಭೆಗೆ ಲಕ್ಷಾಂತರ ರೂ. ಪಂಗನಾಮ ಹಾಕಿದ ರಮೇಶ ಗಾಡಿವಡ್ಡರ ಈತನ ಮೇಲೆ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಾಧಿಕಾರಿಗೆ ನಾಗರಿಕರ ಪರವಾಗಿ ಮನವಿ ಸಲ್ಲಿಸಿದರು.
ಪುರಸಭೆ ಹೆಸರಿನಲ್ಲಿ ನಕಲಿ ಸೀಲ್ ತಯಾರಿಸಿ ಪುರಸಭೆಗೆ ಲಕ್ಷಾಂತರ ರೂ. ಪಂಗನಾಮ
ತೇರದಾಳ : ಪಟ್ಟಣದ ಪುರಸಭೆ ಹೆಸರಿನಲ್ಲಿ ನಕಲಿ ಸೀಲ್ ಹಾಗೂ ನಕಲಿ ಚಲನ್‍ಗಳಿಗೆ ಸಹಿ ಮಾಡಿ ಪುರಸಭೆಗೆ ಲಕ್ಷಾಂತರ ರೂ. ತೆರಿಗೆ ಹಣಕ್ಕೆ ಪಂಗನಾಮ ಹಾಕಿದ್ದಾನೆ ಎಂದು ಆರೋಪಿಸಿ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರಿಗೆ ಪಟ್ಟಣದ ನಾಗರಿಕರ ಪರವಾಗಿ ಮನವಿ ಸಲ್ಲಿಸಿದರು.
ರಮೇಶ ಅಣ್ಣಪ್ಪ ಗಾಡಿವಡ್ಡರ ಖಾಸಗಿ ವ್ಯಕ್ತಿಯಾದ ಈತನು ಪುರಸಭೆ ತೆರಿಗೆ ಹಣವನ್ನು ಪುರಸಭೆ ಹಾಗೂ ಬ್ಯಾಂಕಿನ ನಕಲಿ ಸಿಕ್ಕಾ ಸೀಲ್ ತಯಾರಿಸಿಕೊಂಡು ಹಾಗೂ ಮುಖ್ಯಾಧಿಕಾರಿ ನಕಲಿ ಸಹಿ ಮಾಡಿ ನಕಲಿ ಪ್ರಮಾಣ ಪತ್ರವನ್ನು ಸಹ ತಯಾರಿಸಿ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಇದು ಹಲವು ದಿನಗಳಿಂದ ನಡೆದಿದೆ ಎಂದು ತಿಳಿದು ಬಂದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ರೀತಿಯಾದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿರುವ ಈತನ ಹಿಂದೆ ಇನ್ನೂ ಹಲವಾರು ಜನರ ಕೈವಾಡ ಇರಬಹುದು. ಈ ಕೃತ್ಯ ವೆಸಗಿರುವ ರಮೇಶ ಅಣ್ಣಪ್ಪ ಗಾಡಿವಡ್ಡರ ಇತನು ಪುರಸಭೆಗೆ ತೆರಿಗೆ ಜಮಾ ಆಗಬೇಕಾದ ತೆರಿಗೆ ಹಣವನ್ನು ಇನ್ನೂ ಸಾಕಷ್ಟು ಜನರಿಂದ ಪಡೆದು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸೂಕ್ತ ತನಿಖೆ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಪುರಸಭೆಗೆ ಮರಳಿ ಸಂದಾಯ ಮಾಡಿಕೊಳ್ಳಬೇಕು ಹಾಗೂ ಇತನ ಮೇಲೆ ಕೂಡಲೇ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ನಾಗರಿಕರ ಪರವಾಗಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ, ಹನಮಂತ ರೋಡನ್ನವರ, ಗೌತಮ ರೋಡಕರ, ರಾಜೇಸಾಬ ನಗಾರ್ಜಿ, ಪಿ.ಎಸ್. ಮಾಸ್ತಿ, ಶಿವಾನಂದ ನಡುವಿನಕೇರಿ, ಕೃಷ್ಣಾ ದೊಡಮನಿ ಸೇರಿದಂತೆ ಇತರರು ಇದ್ದರು.
ದೂರು ದಾಖಲಿಸಲು ಹಿಂದೇಟು : ಈ ಕುರಿತು ದೂರನ್ನು ಕೊಡಲು ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಚುನಾಯಿತ ಸದಸ್ಯರು ಪೋಲಿಸ್ ಠಾಣೆಗೆ ಹೋದಾಗ ಪ್ರಕರಣವನ್ನು ದಾಖಲಿಸಿಕೊಳ್ಳಲು ಪೋಲಿಸ್ ಇಲಾಖೆಯವರು ಹಿಂದೇಟು ಹಾಕುತ್ತಿದ್ದರು. ರಾತ್ರಿ 1 ಗಂಟೆಯ ನಂತರ ಪ್ರಕರಣವನ್ನು ದಾಖಲಿಸಲಾಯಿತು. ಅಲ್ಲಿಯವರೆಗೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಪೋಲಿಸ್ ಠಾಣೆಯ ಮುಂದೆ ಕುಳಿತ್ತಿದ್ದರು ಎಂದು ತಿಳಿದು ಬಂದಿದೆ. ಹಾಗೂ ಆ ಸಮಯದಲ್ಲಿ ಪೋಲಿಸರಿಗೂ ಅಲ್ಲಿ ಬಂದಿರುವ ಮುಖಂಡರಿಗೂ ಮಾತಿನ ಚಕಮಕಿ ನಡೆಯಿತು ಎಂದು ಸಹ ತಿಳಿದು ಬಂದಿದೆ. ಪ್ರಕರಣವನ್ನು ದಾಖಲಿಸಿಕೊಳ್ಳಲು ಪೋಲಿಸ್‍ರು ಹಿಂದೇಟು ಹಾಕಿದ್ದು ಏಕೆ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಆರೋಪಿಯು ಏಳು ಜನರಿಂದ ಸುಮಾರು 74,318 ರೂ.ಗಳನ್ನು ಎ.7ರಂದು ಹಣವನ್ನು ಐಸಿಐಸಿಐ ಬ್ಯಾಂಕಿನ ಪುರಸಭೆ ಖಾತೆಗೆ ಜಮಾ ಮಾಡದೆ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣವನ್ನು ಶುಕ್ರವಾರ ರಾತ್ರಿ 1 ಗಂಟೆಯ ನಂತರ ಪಿಎಸ್‍ಐ ವಿಜಯ ಕಾಂಬಳೆ ದಾಖಲಿಸಿಕೊಂಡಿದ್ದಾರೆ. ಸಿಪಿಐ ಜೆ. ಕರುಣೇಶಗೌಡ ಅವರ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Social Plugin