ವರದಿ : ವಿಜಯ ವಾಜಂತ್ರಿ
ತೇರದಾಳದ ಮುಖ್ಯ ರಸ್ತೆ ಟ್ರಾಫಿಕ್ ಜಾಮ್ ಆದ ದೃಶ್ಯ

ರಸ್ತೆ ಕಾಮಗಾರಿ ಸ್ಥಗಿತದಿಂದಾಗಿ ಟ್ರಾಫಿಕ್ ಜಾಮ್ 
ತೇರದಾಳ : ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಪಟ್ಟಣದ ಮೂಲಕ ಹಾಯ್ದು ಹೋಗಿದೆ. ವಾಹನಗಳ ಸಂಚರಿಸಲು ಇದು ಮುಖ್ಯ ರಸ್ತೆಯಾಗಿದೆ. ಕೋಟೆ ಗೋಡೆಯ ಕೆಳಗೆ, ಜೀರಗೇರಿ ಕೆರೆಯ ದಂಡೆಯ ಮೇಲೆ ಹಾದು ಹೋಗುವ ರಸ್ತೆಯು ತೀರಾ ಕೆಟ್ಟಿದ್ದರಿಂದ ಅದನ್ನು ದುರಸ್ತಿ ಮಾಡಲು ರಸ್ತೆಯನ್ನು ಅಗೆದು ದುರಸ್ತಿ ಕಾರ್ಯ ನಡೆದಿದೆ. ಆದರೆ ಈಗ ರಸ್ತೆ ಕಾಮಗಾರಿಯು ಸ್ಥಗಿತಗೊಂಡಿರುವುದರಿಂದ ಎಲ್ಲ ವಾಹನಗಳು ಏಕ ಮುಖ ರಸ್ತೆಯಲ್ಲಿಯೇ ತೇರದಾಳ ಪಟ್ಟಣಕ್ಕೆ ಬರುವ ಹಾಗೂ ತೇರದಾಳದಿಂದ ಹೋಗುವ ಎಲ್ಲ ವಾಹನಗಳು ಒಂದೆ ರಸ್ತೆಯಲ್ಲಿ ಬರಬೇಕಾಗಿರುವುದರಿಂದ ರಸ್ತೆ ಇಕ್ಕಟ್ಟಾಗಿರುವುದರಿಂದ ಸಂಚಾರ ದಟ್ಟನೆಯಿಂದ ಕೂಡಿ ಇಂದು ಸಂಚಾರದಲ್ಲಿ ಕಿರಿ ಕಿರಿ ಎನಿಸಿತು.
  ಇಂದು ಗುರುವಾರ ಸಂತೆಯ ದಿನ ಪಟ್ಟಣದ ಜನತೆ ಹಾಗೂ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಜನತೆ ಮತ್ತು ಕಲೂತಿ ನಗರ, ದೇವರಾಜ ನಗರದ ಜನರು ಸಂತೆಗೆ ಬರುವುದರಿಂದ ಅಟೋ ರೀಕ್ಷಾಗಳು ಬರುತ್ತಿವೆ. ಅವು ಬಂದು ಮಗದುಮ್ ಕಾಂಪ್ಲೆಕ್ಸ್ ಮುಂದೆಯೇ ನಿಲ್ಲಬೇಕು. ಇದರಿಂದ ಬರುವ ಹಾಗೂ ಹೋಗುವ ಎಲ್ಲ ವಾಹನಗಳು ಅದೇ ಮಾರ್ಗದಲ್ಲಿಯೇ ಸಾಗುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಕೆರೆಯ ದಂಡೆಯ ಮೇಲಿರುವ ಪಿಕೆಪಿಎಸ್‍ದಿಂದ ಬಸ್ ನಿಲ್ದಾಣದವರೆಗೆ ವಾಹನಗಳ ಸಾಲು ಪಾದಚಾರಿಗಳಿಗೂ ದಾರಿಯಿಲ್ಲದೆ ನಿಂತಿದ್ದವು. ಅದಕ್ಕೆ ಗುತ್ತಿಗೆದಾರರು ರಸ್ತೆ ದುರಸ್ತಿ ಕಾಮಗಾರಿಯನ್ನು ಬೇಗನೆ ಮಾಡಿ ಮುಗಿಸಿದರೆ ಈ ಯಾವ ತೊಂದರೆಯಾಗುವುದಿಲ್ಲವೆಂದು ಸಾರ್ವಜನಿಕರ ಆಶಯ.