ವರದಿ : ವಿಜಯ ವಾಜಂತ್ರಿ
ತೇರದಾಳದ ಕಲಾದಗಿ-ಕಾಗವಾಡ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಕೋಟೆ ಗೋಡೆಯ ಮೇಲಿಂದ ಚರಂಡಿ ನೀರು ಬಿಳುತ್ತಿರುವುದು.

ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರ ಮೇಲೆ ಚರಂಡಿ ನೀರಾಭಿಷೇಕ

ತೇರದಾಳ : ಪಟ್ಟಣದಲ್ಲಿ ಕಲಾದಗಿ- ಕಾಗವಾಡ ಮುಖ್ಯ ರಸ್ತೆಗೆ ಹೊಂದಿಕೊಂಡು ಕೋಟೆ ಗೋಡೆಯ ಮೇಲಿಂದ ಚರಂಡಿ ನೀರು ಬೀಳುತ್ತಿರುವುದರಿಂದ ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರ ಮೇಲೆ ಚರಂಡಿ ನೀರಾಭಿಷೇಕವಾಗುತ್ತಿದೆ ಇದರಿಂದ ರಸ್ತೆಯ ಮೇಲೆ ಹೋಗುವುದು ದುಸ್ತರವಾಗಿದೆ ಎಂದು ಸಾರ್ವಜನಿಕರು ಹಾಗೂ ಪಾದಚಾರಿಗಳು ಸಂಭಂದಿಸಿದ ಇಲಾಖೆಯವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
   ಕಳೆದ ಹಲವಾರು ವರ್ಷಗಳಿಂದ ಚರಂಡಿ ನೀರು ಕೋಟೆಯ ಗೋಡೆಯ ಮೇಲಿಂದ ಬೀಳುತ್ತಿದೆ. ಚರಂಡಿ ನೀರು ಹೋಗುವಂತೆ ಯಾವುದಾದರೂ ಒಂದು ದಾರಿ ಮಾಡಿ ಎಂದು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ಹೇಳಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಮುಖ್ಯ ರಸ್ತೆಗೆ ಹೊಂದಿಕೊಂಡು ಯಲ್ಲಮ್ಮ ದೇವಿ ದೇವಸ್ಥಾನವಿದೆ. ಇಲ್ಲಿಗೆ ಮಂಗಳವಾರ ಹಾಗೂ ಶುಕ್ರವಾರ ದೇವರಾಜ ನಗರದ ಭಕ್ತರು ಬೆಳಿಗ್ಗೆ ಹೋಗುತ್ತಿರುತ್ತಾರೆ. ಆದರೆ ಅದೇ ಸಮಯಕ್ಕೆ ಕೋಟೆಯ ಮೇಲಿಂದ ಚರಂಡಿ ನೀರು ಬಂದು ರಸ್ತೆಯ ಮೇಲೆ ಬೀಳುವುದರೊಂದಿಗೆ ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಚರಂಡಿ ನೀರು ಸಿಡಿಯುವುದರಿಂದ ಭಕ್ತರು ಪುರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತ ಹೋಗುತ್ತಾರೆ. ಇಲ್ಲಿನ ಚರಂಡಿಯು ಮೇಲೆಯೇ ಇದ್ದು, ಚರಂಡಿ ನೀರು ಬಿದ್ದು ಅದು ರಸ್ತೆಯೇ ಮೇಲೆಯೇ ಹರಿದುಕೊಂಡು ಬರುತ್ತದೆ. ಇದರಿಂದ ಹೋಗುತ್ತಿರುವ ವಾಹನಗಳು ಸಹ ಚರಂಡಿ ನೀರನ್ನು ಪಾದಚಾರಿಗಳಿಗೆ ನೀರನ್ನು ಸಿಡಿಸುವುರಿಂದ ಪಾದಚಾರಿಗಳು ಸಂಚರಿಸಲು ತೊಂದರೆಯಾಗಿದೆ. ಆದಷ್ಟು ಬೇಗನೆ ಈ ಚರಂಡಿ ನೀರು ಹೋಗಲು ಯಾವುದಾದರೊಂದು ದಾರಿ ಮಾಡಿ ಪಾದಚಾರಿಗಳು ಸಂಚರಿಸಲು ಹಾಗೂ ಮಡಿಯಿಂದ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ  ಅನುವು ಮಾಡಿಕೊಡಬೇಕು ಎಂದು ಜಾವೀದ ಖಾಜಿ, ಜಾವೀದ ಅಲಾಸ್, ಶಬ್ಬೀರ ಕೊರಬು ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ.
  ಪುರಸಭೆ ಸದಸ್ಯ ಫಜಲ್ ಅತಾರಾವುತ ಮಾತನಾಡಿ ಈಗಾಗಲೇ ಸಾಕಷ್ಟು ಬಾರಿ ಪುರಸಭೆ ಮುಖ್ಯಾಧಿಕಾರಿ,ಜೆಇ ಹಾಗೂ ಪುರಸಭೆ ಕಿರಿಯ ಆರೋಗ್ಯ ಅಧಿಕಾರಿಗಳಿಗೆ ಹೇಳಿದ್ದರೂ ಅವರು ಈ ಕೆಲಸವನ್ನು ಇಂದು ಮಾಡುತ್ತೇವೆ ನಾಳೆ ಮಾಡುತ್ತೇವೆ ಎಂದು ದಿನ ಕಳೆಯುತ್ತಿದ್ದಾರೆ. ಆದರೆ ಯಾವುದೇ ಕೆಲಸ ಮಾಡಲು ಮುಂದಾಗುತ್ತಿಲ್ಲ ಎಂದು ಹೇಳಿದರು.