ತೇರದಾಳದ ಕಾಳಿನ ಬಜಾರದಲ್ಲಿ ಚರಂಡಿ ಮೇಲಿನ ಮೇಲ್ಚಾವಣಿ ಕಿತ್ತು ಹೋಗಿ ಕಬ್ಬಿಣದ ಸರಳುಗಳು ಕಾಣುತ್ತಿರುವುದು.
ತೇರದಾಳ : ಪಟ್ಟಣದ ಮುಕುಂದ ಔಷಧಿ ಅಂಗಡಿಯ ಪಕ್ಕದಲ್ಲಿ ಕಾಳಿನ ಬಜಾರಿನ ಮುಖ್ಯ ರಸ್ತೆಯಲ್ಲಿನ ಚರಂಡಿ ಮೇಲಿನ ಮೇಲ್ಚಾವಣಿ ಕಿತ್ತು ಹೋಗಿ ವಾಹನಗಳ ಹಾಗೂ ಜನರು ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಜನದಟ್ಟಣೆಯ ಪ್ರದೇಶವಾದ ಕಾಳಿನ ಬಜಾರದಲ್ಲಿ ಎರಡು ಔಷಧಿ ಅಂಗಡಿಗಳಿದ್ದು, ಹಾಗೂ ಗುರುವಾರ ಸಂತೆಯ ದಿನ ಅಲ್ಲಿ ಬೆಲ್ಲದ ವ್ಯಾಪಾರಿಗಳು ಬೆಲ್ಲದ ಅಂಗಡಿಯನ್ನು ಹಚ್ಚಿರುತ್ತಾರೆ. ಮತ್ತು ಪೇಠ ಭಾಗವಿದ್ದ ಕಾರಣ ಇತರೆ ದಿನಗಳಲ್ಲಿ ಸಾಕಷ್ಟು ವಾಹನಗಳು ಇಲ್ಲಿ ಸಂಚರಿಸುತ್ತವೆ. ಇದು ಪೇಠ ಭಾಗದ ಅಂಗಡಿಗಳಿಗೆ ಸರಕುಗಳನ್ನು ಸಾಗಿಸುವ ಮುಖ್ಯ ರಸ್ತೆಯಾಗಿದೆ. ಕಳೆದ ಹಲವು ತಿಂಗಳುಗಳ ಹಿಂದೆ ಇಲ್ಲಿನ ಚರಂಡಿ ಮೇಲಿನ ಮೇಲ್ಚಾವಣಿಯು ಕಿತ್ತು ಹೋಗಿದೆ ಇದನ್ನು ನೋಡದ ಪುರಸಭೆ ಅಧಿಕಾರಿಗಳು ಜಾಣ ಕುರುಡರಂತೆ ಆಗಿದ್ದಾರೆ.
ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಈ ಮಾರ್ಗವಾಗಿ ಸಂಚರಿಸಿದರು ಇತ್ತ ಗಮನ ಹರಿಸುತ್ತಿಲ್ಲವೆಂದು ಸಾರ್ವಜನಿಕರ ಆರೋಪವಾಗಿದೆ. ಮತ್ತು ಇಲ್ಲಿಯೇ ಹತ್ತಿರದಲ್ಲಿ ಹುದ್ದಾರ ಕಿರಾಣಿ ಅಂಗಡಿಯ ಸಮೀಪದಲ್ಲಿಯೇ ಇರುವ ಚರಂಡಿ ಮೇಲಿನ ಮೇಲ್ಚಾವಣಿ ಕಿತ್ತು ಹೋಗಿ ಹಲವು ವರ್ಷಗಳೆ ಆಗಿದೆ. ಇಲ್ಲಿ ಸಾಕಷ್ಟು ಜನರು ಬಿದ್ದಿರುತ್ತಾರೆ. ಹಾಗೂ ದ್ವಿಚಕ್ರವಾಹನ ಸವಾರರು ಸಹ ಆಯ ತಪ್ಪಿ ಬಿದ್ದಿದ್ದಾರೆ, ಮಹಿಳೆಯರು ಹಾಗೂ ವಾಹನ ಸವಾರರು ಪುರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲವೆನ್ನುತ್ತಾರೆ ಸಾರ್ವಜನಿಕರ ಆರೋಪ. ಇನ್ನಾದರೂ ಪುರಸಭೆ ಅಧಿಕಾರಿಗಳಾಗಲಿ ಚುನಾಯಿತ ಪ್ರತಿನಿಧಿಗಳಾಗಲಿ ಸ್ವಲ್ಪ ಇತ್ತ ಗಮನ ಹರಿಸಿ ಈ ಎರಡು ಚರಂಡಿಗಳ ಮೇಲಿನ ಮೇಲ್ಚಾವಣಿಯನ್ನು ದುರಸ್ತಿ ಮಾಡಬೇಕು ಎಂದು ಪತ್ರಿಕೆಯ ಮುಖಾಂತರ ಅಧಿಕಾರಿಗಳಿಗೆ ತಿಳಿಸಿದ್ದಾರೆ.
Social Plugin