ಬನಹಟ್ಟಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಮುಗ್ಧ ರೈತ ಹಾಗು ಮತದಾರರು ಪರೀಕ್ಷೆ ಬೇಡ
ಮೋದಿ ಸರ್ವಾಧಿಕಾರ ಧೋರಣೆ ಕೈಬಿಡಲಿ
ರಬಕವಿ-ಬನಹಟ್ಟಿ,ಡಿ3: ಕೃಷಿ ಕಾಯ್ದೆ ವಿರೋಧಿಸಿ ವಿವಿಧ ರಾಜ್ಯಗಳಿಂದ ಪ್ರತಿಭಟನೆ ನಡೆಸಲು ನವದೆಹಲಿಗೆ ತೆರಳುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯವೆಗುತ್ತಿದೆ ಎಂದು ಆರೋಪಿಸಿ ಗುರುವಾರ ನಗರದ ಗಾಂಧಿ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಕೃಷಿ ಕಾಯ್ದೆ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರ ಜಗ್ಗದ ಕಾರಣ ಸಹಸ್ರಾರು ಸಂಖ್ಯೆಯ ರೈತರು ನವದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ಕೇಂದ್ರ ಸಕಾರ ಅಮಾಯಕ ರೈತರ ಮೇಲೆ ಲಾಠಿ ಪ್ರಹಾರ, ಜಲಫಿರಂಗಿ, ಅಶ್ರುವಾಯು ಸಿಡಿಸಿ ದೌರ್ಜನ್ಯ ಎಸಗಿದೆ. ಅವರಿಗೆ ದೆಹಲಿಯೊಳಗೆ ತೆರಳಲು ಬಿಡುತ್ತಿಲ್ಲ. ಇದು ಪ್ರಧಾನಿ ನರೇಂದ್ರ ಮೊದಿಯವರ ಸರ್ವಾಧಿಕಾರ ಧೋರಣೆ. ಉದ್ಧಟತನದ ಪರಮಾವಧಿ. ಅದಕ್ಕೆ ಭವಿಷ್ಯದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಮುಗ್ಧ ಮತದಾರರ ಹಾಗು ರೈತರನ್ನು ಪರೀಕ್ಷೆ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಎಚ್ಚರಿಕೆ ನೀಡಿದರು.
ಕೃಷಿ ಕಾಯ್ದೆ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಮಸೂದೆ, ಕಾರ್ಮಿಕ ವಿರೋಧಿ ಸಂಹಿತೆ ಕೂಡಲೇ ಹಿಂಪಡೆಯಬೇಕು. ಬೆಂಬಲ ಬೆಲೆ ನಿಗದಿಪಡಿಸುವ ಡಾ. ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ಕೃಷಿ ಆಯೋಗದ ಸಲಹೆ ಜಾರಿಗೆ ತರಬೇಕು. ಕೋವಿಡ್ ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟಕ್ಕೊಳಗಾದ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು.
ಮಹಾಲಿಂಗಪೂರ ಘಟನೆಗೆ ಖಂಡನೆ: ಮಹಿಳೆಯ ಮೇಲೆ ಬಿಜೆಪಿ ಶಾಸಕ ಸಿದ್ದು ಸವದಿ ಹಾಗು ಬೆಂಬಲಿಗರಿಂದ ದೌರ್ಜನ್ಯವೆಸಗಿರುವದನ್ನು ರೈತ ಸಂಘವು ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಆಕ್ರೋಶ ವ್ಯಕ್ತಪಡಿಸಿದರು. ಕೆಟ್ಟ ಸಂಸ್ಕ್ರತಿಯಿಂದ, ದುಡ್ಡಿನ ಅಮಲಿನಿಂದ ಏನೆಲ್ಲ ಮಾಡಬೇಕೆಂಬ ಹುಂಬ ನೀತಿ ಅನುಸರಿಸುತ್ತಿರುವ ರಾಜಕಾರಣಗಳು ತಮ್ಮ ನಡೆಗಳನ್ನು ತಿದ್ದಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನರೇ ತಿದ್ದುವರೆಂದರು.
ರೈತ ಸಂಘದ ತಾಲೂಕಾಧ್ಯಕ್ಷ ಮಾಯಪ್ಪ ತುರಾದಿ, ಉಪಾಧ್ಯಕ್ಷ ಬಸು ಮೇಲವಾಡಿ, ಅಯ್ಯಪ್ಪ ಸಸಾಲಟ್ಟಿ, ಸಿದ್ದು ಉಳ್ಳಾಗಡ್ಡಿ, ಭೀಮಸಿ ಎಡತ್ತಿ, ಶಿವು ನಾಗನೂರ, ದುಂಡಪ್ಪ ಕುಡಚಿ, ಅಲ್ಲಪ್ಪ ಬಳಗಾರ, ನಿಂಗಪ್ಪ ಗುರವ, ಶಿವನಿಂಗ ಮರೆಗುದ್ದಿ ಸೇರಿದಂತೆ ಅನೇಕರಿದ್ದರು.