ವಸತಿ ಗೃಹಗಳಿಗೆ ಮುಳ್ಳಿನ ಕಂಟಿಗಳ ದಾರಿಯಲ್ಲಿಯೇ ಸಾಗಬೇಕು.
ಆಸ್ಪತ್ರೆಗೆ ಬಂದ ರೋಗಿಗಳು ಗಡಸು ಹಾಗು ಕೊಳಚೆಯಿಂದ ಕೂಡಿರುವ ನೀರನ್ನೇ ಸೇವಿಸುವ ಅನಿವಾರ್ಯತೆ.
-ಮಲ್ಲಿಕಾರ್ಜುನ ತುಂಗಳ
*ಆಸ್ಪತ್ರೆಗೆ ಮೇಲ್ದರ್ಜೆಗೆ ಒತ್ತಾಯ
* ಸೌಲಭ್ಯಗಳಿಲ್ಲದೆ ರೋಗಿಗಳ ಪರದಾಟ
*ಡಯಾಲಿಸಸ್ ಕೇಂದ್ರಕ್ಕೆ ಒತ್ತಾಯ
ರಬಕವಿ-ಬನಹಟ್ಟಿ,ಡಿ3:ರಬಕವಿ-ಬನಹಟ್ಟಿ ನಗರದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ವಿವಿಧ ಸೌಕರ್ಯಗಳಿಲ್ಲದೆ ಅನಾರೋಗ್ಯದಿಂದ ಬಳಲುತ್ತಿದೆ.
ದಿನಂಪ್ರತಿ ಆಗಮಿಸುವ ನೂರಾರು ರೋಗಿಗಳಿಗೆ ಆಸ್ಪತ್ರೆ ಆವರಣದಲ್ಲಿ ಕುಳಿತುಕೊಳ್ಳಲು ಸಮರ್ಪಕವಾದ ಆಸನಗಳ ವ್ಯವಸ್ಥೆಯಿಲ್ಲ. ರೋಗಿಗಳಿಗೆ ಕುಡಿಯಲು ಶುದ್ಧ ನೀರು ಗಗನಕುಸುಮವಾಗಿದ್ದು, ಟ್ಯಾಂಕ್‍ನಲ್ಲಿ ಜಿಡ್ಡುಗಟ್ಟಿದ ನೀರನ್ನೇ ರೋಗಿಗಳು ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಡಾಕ್ಟ್ರಿಗೆ ಫೋನ್ ಮಾಡ್ಬೇಕ್ರೀ: ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಗುತ್ತಿಗೆ ಆಧಾರದ ಮೇಲಿರುವ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿಯೇ ತಮ್ಮ ಸೇವೆಗೆ ಮುಂದಾಗಿದ್ದಾರೆ. ಇತ್ತ ಸರ್ಕಾರಿ ಆಸ್ಪತ್ರೆಗೆ ಯಾವದೇ ರೋಗಿ ಬಂದರೂ ಸಹಿತ ಗಂಟೆಗಟ್ಟಲೆ ಕಾಯಬೇಕು. ಇಲ್ಲವಾದಲ್ಲಿ ಡಾಕ್ಟ್ರಿಗೆ ಫೋನ್ ಮಾಡ್ಬೇಕು ಇದರಿಂದ ರೋಗಿಗಳು ತುಂಬಾ ಪರದಾಡುವಂತ ಸ್ಥಿತಿಯಾಗಿದೆ. ಕೂಡಲೇ ಖಾಯಂ ವೈದ್ಯರ ನೇಮಕಾತಿ ಅನಿವಾರ್ಯವಿದೆ ಎಂದು ಕೆಲ ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಇಡೀ ತೇರದಾಳ ಕ್ಷೇತ್ರದಲ್ಲಿಯೇ ಅಂದಾಜು 86 ಸಾವಿರದ ಅತಿ ಹೆಚ್ಚಿನ ಜನಸಾಂದ್ರತೆ ಹಾಗು ಏಕೈಕ ನಗರಸಭೆ ಹೊಂದಿರುವ ರಬಕವಿ-ಬನಹಟ್ಟಿ ಜನತೆಗೆ ಸಮುದಾಯ ಆಸ್ಪತ್ರೆ ಗಗನಕುಸುವಾಗಿದೆ.
ಮೇಲ್ದರ್ಜೆಗೆ ಮನವಿ: ಕೂಡಲೇ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ, ಎಲ್ಲ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂದಾಗಬೇಕೆಂದು ಸ್ಥಳೀಯ ಸಂಘಟನೆಗಳು ಒತ್ತಾಯಿಸಿವೆ.
ಡಯಾಲಿಸಸ್ ಕೇಂದ್ರಕ್ಕೆ ಒತ್ತಾಯ: ಈ ಭಾಗದಲ್ಲಿ ಕಿಡ್ನಿ ವೈಪಲ್ಯಗೊಳಗಾದ ಬಡ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಎಲ್ಲರಿಗೂ ದೂರದ ಬಾಗಲಕೋಟೆ ಅಥವಾ ವಿಜಯಪುರಕ್ಕೆ ತೆರಳಲು ಆರ್ಥಿಕವಾಗಿ ಸಬಲರಾಗಿಲ್ಲ. ಒಂದು ತಿಂಗಳಿಗೆ ಕೇವಲ 1 ರಿಂದ 2 ಸಾವಿರ ರೂ.ಗಳ ರೋಗಿಯ ವೈದ್ಯಕೀಯ ಖರ್ಚು 10 ರಿಂದ 12 ಸಾವಿರ ರೂ.ಗಳವರೆಗೆ ಆಗುತ್ತಿದೆ. ಕಾರಣ ಈ ಡಯಾಲಿಸಸ್ ಕೇಂದ್ರವು ಕೇವಲ ಶ್ರೀಮಂತರ ಪಾಲಾಗಿದ್ದು, ಬಡತನ ರೇಖೆಯಲ್ಲಿ ಹಾಗು ಮಧ್ಯಮ ವರ್ಗದ ಕುಟುಂಬಗಳಿಗೆ ಇಷ್ಟೊಂದು ವೆಚ್ಚ ಸಾಧ್ಯವಾಗದ ಮಾತು. ಕೂಡಲೇ ಅವಳಿ ನಗರಕ್ಕೆ ಸಂಬಂಧಪಟ್ಟಂತೆ ಡಯಾಲಿಸಸ್ ಕೇಂದ್ರವನ್ನು ಒದಗಿಸಬೇಕೆಂದು ಸ್ಥಳೀಯರ ಒತ್ತಾಯವಾಗಿದೆ.
ದುರ್ವಸತಿ `ಗೃಹಗಳು: ಇಲ್ಲಿನ ಸಮುದಾಯ ಆಸ್ಪತ್ರೆಯ ಹಿಂದೆಯೇ ಇರುವ ವಸತಿ ಗೃಹಗಳಿಗೆ ತೆರಳಬೇಕಾದರೆ ಮುಳ್ಳಿನ ಕಂಟಿಯಲ್ಲಿಯೇ ಸಂಚರಿಸಬೇಕು. ವಿದ್ಯುತ್ ಸಮಸ್ಯೆಯೊಂದಿಗೆ ನೀರಿನ ಸೌಲಭ್ಯವಿಲ್ಲ. ಅಲ್ಲದೆ ಇಲ್ಲಿನ ಶೌಚಾಲಯಗಳೂ ಸಹಿತ ಹಾಳು ಬಿದ್ದು ಗಬ್ಬೆದ್ದು ನಾರತ್ತಿವೆ.
ಕೇವಲ ಐದು ವಸತಿ ಗೃಹಗಳಿದ್ದು, ಇಲ್ಲಿನ ಪ್ರಮುಖ ವೈದ್ಯರಿಗೆ ಅಥವಾ ಸಿಬ್ಬಂದಿಗಳಿಗೆ ವ್ಯವಸ್ಥೆಯಿಲ್ಲ. ವಿಶ್ರಾಂತಿಗಾಗಿ ಒಂದು ಕೊಠಡಿಯೇ ಇಲ್ಲದೆ ಪರದಾಡುವಂತ ಸ್ಥಿತಿ ಇಲ್ಲಿನ ವೈದ್ಯರದ್ದಾಗಿದೆ. ವಸತಿ ಗೃಹಗಳಿಗೆ ತೆರಳಬೇಕಾದರೆ ರಸ್ತೆಯಿಲ್ಲದ ಕಾರಣ ಮುಳ್ಳಿನ ಕಂಟಿಗಳಲ್ಲಿಯೇ ಸಾಗಬೇಕು. ರಾತ್ರಿ ಹೊತ್ತು ಸಂಚರಿಸಲು ಸಾಕಷ್ಟು ಅನಾನುಕೂಲತೆ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.
.

Social Plugin