ಬನಹಟ್ಟಿಯ ಕೆಎಚ್‍ಡಿಸಿ ಆವರಣದಲ್ಲಿರುವ ಶುದ್ಧ ನೀರಿನ ಘಟಕ ಕೆಟ್ಟು ನಿಂತಿರುವದು.

ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕ: ದುರಸ್ಥಿಗೆ ಆಗ್ರಹ
ರಬಕವಿ-ಬನಹಟ್ಟಿ,ಡಿ3: ನಗರದ ಕೆಎಚ್‍ಡಿಸಿ ಕಾಲನಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತ ಕಾರಣ ಈ ಭಾಗದ ಬಡವರು, ದೀನ ದಲಿತರಿಗೆ ಶುದ್ಧ ನೀರನ್ನು ಸೇವಿಸಲು ತೀವ್ರ ತೊಂದರೆಯಾಗುತ್ತಿದೆ.
ಆಗಾಗ್ಗೆ ಕೆಟ್ಟು ಹೋಗುತ್ತಿರುವ ಶುದ್ಧ ನೀರಿನ ಘಟಕಗಳ ದುರಸ್ಥಿಗೆ ಪೂರಕವಾದ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. 
ರಬಕವಿ-ಬನಹಟ್ಟಿ ನಗರಾದ್ಯಂತ ಸುಮಾರು 15 ಕ್ಕೂ ಅಧಿಕ ನೀರಿನ ಶುದ್ಧ ಘಟಕಗಳಿದ್ದು, ಸ್ಥಳೀಯ ನಗರಸಭೆ ಕಾರ್ಯನಿರ್ವಹಿಸುತ್ತಿದ್ದು, ದುರಸ್ಥಿ ಸಂದರ್ಭದಲ್ಲಿ ವಿಳಂಬನೀತಿ ಅನುಸರಿಸದೆ ತಕ್ಷಣವೇ ಕಾರ್ಯಪ್ರವ್ರರ್ತರಾಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಸೋಮವಾರ ಪೇಟೆಯಲ್ಲಿ ಸ್ಥಾಪಿಸಿ: ಬನಹಟ್ಟಿಯ ಸೋಮವಾರ ಪೇಟೆಯಲ್ಲಿ ಶುದ್ಧ ನೀರಿನ ಘಟಕವಿಲ್ಲದ ಕಾರಣ ದೂರದಿಂದ ಹೊತ್ತು ತರುವಲ್ಲಿ ಮಹಿಳೆಯರಿಗೆ ಹಾಗು ವಯೋವೃದ್ಧರಿಗೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ನಗರಸಭೆಯಿಂದ ಶುದ್ಧ ಕುಡಿಯುವ ನೀರಿನ ಘಟಕವೊಂದನ್ನು ಸ್ಥಾಪಿಸಬೇಕೆಂದು ಬಸವರಾಜ ಬೆಳಗಲಿ, ನಿಂಗಯ್ಯ ಮುಧೋಳಮಠ, ಶಂಕರ ಜುಂಜಪ್ಪನವರ, ಮಹಾದೇವ ತುಂಗಳ, ಮಹಾದೇವ ಚರ್ಕಿ ಒತ್ತಾಯಿಸಿದ್ದಾರೆ.