ಬನಹಟ್ಟಿಯಲ್ಲಿ ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಮಾತನಾಡಿದರು.

ಪ್ರಧಾನಿ ಹುದ್ದೆ ನೀಡಿದರೂ ಹೋಗಲ್ಲ-ಎಸ್.ಆರ್. ಪಾಟೀಲ

ರಬಕವಿ-ಬನಹಟ್ಟಿ,ಡಿ5: ಮೈತ್ರಿ ಸರ್ಕಾರ ಪತನಕ್ಕೆ ವಿನಾಕಾರಣ ಬಣ್ಣ ಬೇಡ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಮೇಲೆ ಗೌರವವಿದೆ. ರಾಜ್ಯದ ಸಿಎಂ ಆಗಿ ಶಾಸಕರ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲಗೊಂಡ ಕಾರಣ ಸರ್ಕಾರ ಪತನವಾಗುವಲ್ಲಿ ಕಾರಣವಾಗಿದೆ. ಸುಮ್ಮನೆ ಹೇಳಿಕೆ ನೀಡಿ ಸಿದ್ರಾಮಯ್ಯನವರ ತೇಜೋವಧೆ ಮಾಡುವದು ಸರಿಯಲ್ಲ. ನಮ್ಮ ಪಕ್ಷದವರೂ ಸೇರಿ ಒಟ್ಟಾರೆ 17 ಶಾಸಕರ ರಾಜೀನಾಮೆಗೆ ಕುಮಾರಸ್ವಾಮಿಯವರೇ ಕಾರಣವೆಂದು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ತೀಕ್ಷ್ಣವಾಗಿ ತಿವಿದರು.

ನನಗೆ ಪ್ರಧಾನಿ ಹುದ್ದೆ ನೀಡುತ್ತೇನೆಂದರೂ ಸಹಿತ ಪಕ್ಷದ ತತ್ವ, ಆದರ್ಶಗಳ ಅನುಗುಣವಾಗಿರುವ ಪಕ್ಷವನ್ನು ಬಿಟ್ಟು ತೆರಳಲ್ಲ. ಆಗಿನ ಶಾಸಕರಿಗೆ ಹಣ ಹಾಗು ಅಧಿಕಾರದ ಆಸೆ ತೋರಿಸಿ ಬಿಜೆಪಿ ಇಂತಹ ಕೃತ್ಯ ನಡೆಸಿದೆ ಎಂದರು.

ಒಟ್ಟಾರೆ 5 ವರ್ಷ ಗಟ್ಟಿ ನಾಯಕತ್ವದೊಮದಿಗೆ ಆಳ್ವಿಕೆ ನಡೆಸುವಲ್ಲಿ ಅಸಮರ್ಥವೇ ಕಾರಣವಾಗಿದೆ ವಿನಃ ಸಿದ್ರಾಮಯ್ಯನವರಲ್ಲವೆಂದು ಎಸ್‍ಆರ್ ಹೇಳಿದರು.

ರಾಜ್ಯದಲ್ಲಿ ಸರ್ಕಾರ ನಿಷ್ಕ್ರಿಯಗೊಂಡಿದೆ-ಎಸ್.ಆರ್. ಪಾಟೀಲ

ರಬಕವಿ-ಬನಹಟ್ಟಿ

ರಾಜ್ಯದ ಜನತೆಗೆ ಆಶಾಕಿರಣವಾಗಬೇಕಿದ್ದ ಸರ್ಕಾರ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು ವಿಪರ್ಯಾಸವೆಂದು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಸರ್ಕಾರದ ವಿರುದ್ಧ ಹರಿಹಾಯ್ದರು.

ರಾಜ್ಯದ 180 ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಸ್ವತಃ ಸರ್ಕಾರವೇ ಪರಿಶೀಲನೆ ಮೂಲಕ ಪ್ರಕಟಿಸಿದೆ. ನೂರಾರು ಜನ-ಜಾನುವಾರುಗಳು ಸತ್ತಿವೆ. 25 ಸಾವಿರ ಕೋಟಿ ರೂ.ಗಳಷ್ಟು ಹಾನಿಯಾಗಿದ್ದು, 45 ಲಕ್ಷ ಎಕರೆಯಷ್ಟು ಬೆಳೆ ಹಾಳಾಗಿದ್ದರೂ ಪರಿಹಾರ ದೊರಕಿಸುವಲ್ಲಿ ಸರ್ಕಾರ ವಿಫಲಗೊಂಡಿದೆ.

ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದರೂ ಕೇಂದ್ರದಿಂದ ಪರಿಹಾರಕ್ಕಾಗಿ ತುಟಿ ಎರಡು ಮಾಡದೆ ಕೈಕಟ್ಟಿ ಕುಳಿತಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವದಾಗಿ ಹೇಳಿಕೆ ನೀಡುವ ಬಿಜೆಪಿಯ ಕೊಡುಗೆ ಇದೇನಾ? ಎಂದು ಎಸ್.ಆರ್. ಪ್ರಶ್ನಿಸಿದರು.