ರಬಕವಿಯಲ್ಲಿ ರೈತರ ಸಭೆಯಲ್ಲಿ ಸಾವರಿನ್ ಸಕ್ಕರೆ ಕಾರ್ಖಾನೆ ಮಾಲಿಕ ಶಿವಕುಮಾರ ಮಾಲಘಾಣ ಮಾತನಾಡಿದರು.

ಕಾರ್ಖಾನೆ ಮಾರಾಟ ಮಾಡಿಯಾದರೂ ರೈತರ ಹಣ ನೀಡುವೆ

ರಬಕವಿ-ಬನಹಟ್ಟಿ,ಡಿ7: ತೇರದಾಳ ಸಮೀಪದ ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ಬರಬೇಕಿದ್ದ ರೈತರ ಕಬ್ಬಿನ ಬಿಲ್ ಬಾಕಿ ಹಣ 20 ಕೋಟಿ ರೂ.ಗಳನ್ನು ಅತಿ ಶೀಘ್ರವೇ ಕಾರ್ಖಾನೆ ಪ್ರಾರಂಭವಾಗಲಿದ್ದು, ಪ್ರಾಮಾಣಿಕವಾಗಿ ಹಣ ನೀಡುವೆ, ಇಲ್ಲವಾದಲ್ಲಿ ಕಾರ್ಖಾನೆ ಮಾರಾಟ ಮಾಡಿಯಾದರೂ ರೈತ ಹಣ ನೀಡುವೆ ಎಂದು ಕಾರ್ಖಾನೆ ಮಾಲಿಕ ಶಿವಕುಮಾರ ಮಾಲಘಾಣ ರೈತರಿಗೆ ಭರವಸೆ ನೀಡಿದರು.

ರಬಕವಿಯಲ್ಲಿ ರೈತರ ಸಭೆಯಲ್ಲಿ ಅಚ್ಚರಿಯಾಗಿ ಪ್ರವೇಶಿಸಿದ ಸಾವರಿನ್ ಸಕ್ಕರೆ ಕಾರ್ಖಾನೆ ಮಾಲಿಕ ಮಾಲಘಾಣ ಮಾತನಾಡಿ, 2017-18 ರಲ್ಲಿ ಬಾಕಿಯಿರುವ ರೈತರ ಬಿಲ್ ಹಣ ಒದಗಿಸುವೆ. ಮೊದಲೇ ಕಾರ್ಖಾನೆಯನ್ನು ಹುಂಬತನದಿಂದ ನಿರ್ಮಿಸಿದ್ದು, ಸ್ವಲ್ಪ ಸಮಯಾವಕಾಶ ನೀಡಿದರೆ ಎಲ್ಲವೂ ಸರಿ ಹೋಗಲಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭ ರೈತರು ಕಾರ್ಖಾನೆ ಮರು ಪ್ರಾರಂಭಕ್ಕೆ ಕಟ್ಟುನಿಟ್ಟು ಹಾಕಿದ್ದಲ್ಲದೆ, ಕಾರ್ಖಾನೆಗೆ ಸಾಲ ಪಡೆಯಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ಕಾರ್ಖಾನೆಯಲ್ಲಿ ಯಾವದೇ ಕಾರಣಕ್ಕೂ ಕಬ್ಬು ಕಟಾವ್ ಮಾಡಿ ಸಕ್ಕರೆ ತಯಾರಿಸುವಂತಿಲ್ಲ. ಸ್ವಚ್ಛತೆ ಹಾಗು ಕಾರ್ಖಾನೆ ಸುಸಜ್ಜಿತವಾಗಿದೆ ಎನ್ನುವದಕ್ಕೆ ಮಾತ್ರ ಅವಕಾಶ ಕಲ್ಪಿಸುವೆವು ಎಂದರು.

ಇದಕ್ಕೆ ಉತ್ತರಿಸಿದ ಮಾಲಘಾಣ, ರೈತರು ಮತ್ತು ನಮ್ಮ ಮಧ್ಯವಿರುವ ಯಾವದೇ ಸಮಸ್ಯೆಯಿದ್ದರೂ ಒಂದುಗೂಡಿ ಬಗೆ ಹರಿಸುವಲ್ಲಿ ಆದ್ಯತೆ ನೀಡುವೆ. ಉಚಿತವಾಗಿ ಕಬ್ಬು ನೀಡಿದರೂ ನುರಿಸುವದಿಲ್ಲವೆಂದು ಸ್ಪಷ್ಟನೆ ನೀಡಿದರು.

ಇದೇ ಸಂದರ್ಭ ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕಾಂಬಳೆ, ಗಂಗಾಧರ ಮೇಟಿ, ವಾಸುದೇವ ಮೇಟಿ, ಬಂದು ಪಕಾಲಿ, ಮಗೆಪ್ಪ ತೇರದಾಳ, ಹೊನ್ನಪ್ಪ ಬಿರಡಿ, ಹಣಮಂತ ಪೂಜಾರಿ, ಕಲ್ಮೇಶ ಗುಂಜಗಟ್ಟಿ, ದುಂಡಪ್ಪ ಯರಗಟ್ಟಿ, ಎಸ್.ಆರ್. ಬಡಕಲ್, ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವನಿಂಗ ಟಿರಕಿ ಸೇರಿದಂತೆ ನೂರಾರು ರೈತರಿದ್ದರು.

`ಕಳೆದೆರಡು ವರ್ಷಗಳಿಂದ ರೈತರ ಕಬ್ಬಿನ ಬಿಲ್ 20 ಕೋಟಿ ರೂ. ಕಾರ್ಖಾನೆಯಿಂದ ನೀಡಬೇಕಿದೆ. ಹಾನಿಯುಂಟಾದ ಕಾರಣ ಇದ್ಯಾವದಕ್ಕೂ ಅವಕಾಶ ದೊರಕಿಲ್ಲ. ಒಂದು ವಾರದೊಳಗಾಗಿ ಸಹಕಾರಿ ಬ್ಯಾಂಕ್ ಮೂಲಕ ಸಾಲ ಪಡೆದು ಕಾರ್ಖಾನೆಯನ್ನು ಸುಸೂತ್ರವಾಗಿ ಪ್ರಾರಂಭಿಸಿ ರೈತರ ಬಾಕಿ ನೀಡುವೆ’.----ಶಿವಕುಮಾರ ಮಾಲಘಾಣ, ಸಾವರಿನ್ ಸಕ್ಕರೆ ಕಾರ್ಖಾನೆ, ತೇರದಾಳ.