ಬನಹಟ್ಟಿಯಲ್ಲಿ ಶತಾಯುಷಿ ಸಿದ್ದವ್ವಜ್ಜಿ ಯಲ್ಲಪ್ಪ ಹೊಸಪೇಟೆ(ಕೋಲೂರ)(110)ಯವರನ್ನು ಗೌಡರು ಮತ್ತು ರೈತ ಸಮಾಜದ ಹಿರಿಯರು ಸನ್ಮಾನಿಸಿದರು.
ಕಾಯಕವೇ ಕೈಲಾಸ ಈ ಶತಾಯುಷಿ ಗುಟ್ಟು
ಎತ್ತಿ ಆಟವಾಡಿಸುತ್ತಿದ್ದ ಸೋದರನೂ ಇದೀಗ ಶತಾಯುಷಿಯಾಗಿದ್ದಾರೆ.
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಡಿ2: ವಯಸ್ಸು 110, ಕಣ್ಣು, ಕಿವಿ ಎಲ್ಲವೂ ಸ್ಪಷ್ಟ, ಎಂಥವರನ್ನೂ ನಾಚಿಸುವಂತ ವೇಗದ ನಡಿಗೆ, ನಿತ್ಯ ಆಹಾರದಲ್ಲಿ ಮಿತವ್ಯಯ ಬಳಕೆ. ಚಹಾ, ಬೆಣ್ಣೆ, ತುಪ್ಪ ಹಾಲಿನಿಂದ ಬಹುದೂರ ಆರೋಗ್ಯ ಕಾಪಾಡಿಕೊಳ್ಳುವ ಈ ಅಜ್ಜಿಯ ನಿತ್ಯ ಚಟುವಟಿಕೆಯೇ ಬಲು ಅಪರೂಪ.
ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ತೋಟದ ರಸ್ತೆಯಲ್ಲಿರುವ ಶತಾಯುಷಿ ಸಿದ್ದವ್ವ ಯಲ್ಲಪ್ಪ ಹೊಸಪೇಟೆ(ಕೋಲೂರ) ಮೂಲತಃ ಮಹಾಲಿಂಗಪೂರ ಸಮೀಪದ ಬೆಳಗಲಿ ಗ್ರಾಮದವಳು. ಈತಳ ಶಿಕ್ಷಣ ಅಷ್ಟಕಷ್ಟೇಯಾದರೂ ಬದುಕಿನಲ್ಲಿ ಶಿಸ್ತಿನ ಶಿಕ್ಷಣ ಎಲ್ಲರೂ ಕಲಿಯಬೇಕಾದಷ್ಟು ಅರಿತಿರುವ ಹಿರಿಯಜ್ಜಿ.
ಈಗಲೂ ಸಹಿತ ಬೆಳಿಗಿನ ಜಾವ 4 ಗಂಟೆಗೆ ಎದ್ದೇಳುವ ರೂಢಿ. ಹೊಲ ಕೆಲಸದಲ್ಲಿ ತೊಡಗುತ್ತಿದ್ದ ಸಿದ್ದವ್ವಜ್ಜಿ ಕಳೆದ 10 ವರ್ಷಗಳಿಂದ ಮನೆಗೆಲಸದಲ್ಲಿ ಮಾತ್ರ ಬ್ಯೂಜಿ...! ದಿನಂಪ್ರತಿ ಉಪಹಾರ, ಚಹಾಗಳೆಂಬ ಗೀಳಿಲ್ಲ. ಖಡಕ್ ರೊಟ್ಟಿ, ಮೆಣಸಿನಕಾಯಿ ಚಟ್ನಿ ಈಗಲೂ ಇಷ್ಟ. ಯಾವಾಗಲಾದರೊಮ್ಮೆ ಜಿಡ್ಡು ಸಂದರ್ಭ ಒಂದೆರಡು ಮಾತ್ರೆಗಳನ್ನು ತೆಗೆದುಕೊಳ್ಳದನ್ನು ಬಿಟ್ಟರೆ ಈಗಲೂ ಮಧುಮೇಹ, ರಕ್ತದೊತ್ತಡಗಳಂತಹ ಯಾವದೇ ರೋಗಗಳು ಅಜ್ಜಿಯತ್ತ ಸುಳಿದಿಲ್ಲ.
ಸ್ವಾತಂತ್ರ್ಯಪೂರ್ವ ಕಾಲದ ಹಳೆಯ ನೆನಪುಗಳನ್ನು ಎಳೆ ಎಳೆಯಾಗಿ ಹೇಳುವ ಹಿರಿಯಜ್ಜಿ. ಈ ಭಾಗದ ಅಂದಿನ ಮಹಿಳಾ ಸಾಧಕಿಯರು ಎಲೆಮರೆಯ ಕಾಯಿಯಂತೆ ಹೋರಾಟ ನಡೆಸಿದವರ ಹೆಸರನ್ನೂ ಹೇಳುತ್ತಾರೆ. ಆದರೆ ಅವರ್ಯಾರೂ ಈಗ ಇಲ್ಲದ ಕಾರಣ ಈ ಭಾಗದ ಕೆಲ ಇತಿಹಾಸ ಮರಿಚೀಕೆಯಾಗಿದೆ ಎಂಬ ನೋವು ಅಜ್ಜಿಯದ್ದಾಗಿದೆ.
ಎತ್ತಿ ಆಡಿಸಿದ ಸಂಬಂಧಿಯೂ ಶತಾಯುಷಿ: ಶತಾಯುಷಿ ಸಿದ್ದವ್ವಜ್ಜಿಯ ಸೋದರ ಸಂಬಂಧಿಯಾದ ಬಸಪ್ಪ ಸಿದಕಡಿ(101)ಯವರೂ ಕಳೆದ ವರ್ಷವಷ್ಟೇ ಕುಟುಂಬಸ್ಥರಿಂದ ಶತಾಯುಷಿ ಆಚರಿಸಿಕೊಂಡ ಅಪರೂಪದ ವ್ಯಕ್ತಿ. ಈ ಅಜ್ಜ ಚಿಕ್ಕವನಿದ್ದ ಸಂದರ್ಭದಲ್ಲಿ ಈ ಅಕ್ಕನ ಬಗಲಲ್ಲಿಯೇ ಆಟವಾಡಿದ್ದೇನೆಂದು ಹೇಳುತ್ತಿದ್ದರೆ, ಆ ಸಂದರ್ಭದ ಸಂತಸ ಮುಗಿಲು ಮುಟ್ಟುವಂತಿತ್ತು.
ಬುಧವಾರ ಕೋಲೂರ ಎಂಬುವರ ತೋಟದಲ್ಲಿ ಅಜ್ಜಿಯ 110 ವರ್ಷಾಚರಣೆ ಮಾಡಲಾಯಿತು. ಇದೇ ಸಂದರ್ಭ ಸಿದ್ಧನಗೌಡ ಪಾಟೀಲ, ಬಸು ಗುಂಡಿ, ಶ್ರೀಶೈಲ ಉಳ್ಳಾಗಡ್ಡಿ, ಅಣ್ಣಪ್ಪ ಪಾಟೀಲ, ಸಿದ್ದಪ್ಪ ಅಕ್ಕಿಮಡ್ಡಿ, ಶೇಖರ ಸಂಪಗಾಂವಿ, ಸತ್ಯಪ್ಪ ಕೆಸರಗೊಪ್ಪ, ಅಣ್ಣಪ್ಪ ಪಾಟೀಲ(ತುಬಚಿ), ಮುರಿಗೆಪ್ಪ ಆದರಗಿ, ಸಿದ್ದಪ್ಪ ಶೇಡ್ಯಾಳ ಸೇರಿದಂತೆ ಗೌಡರು ಮತ್ತು ರೈತ ಸಮಾಜದವರಿದ್ದರು.

Social Plugin