*ನೇಕಾರರು ತೀವ್ರ ಸಂಕಷ್ಟದಲ್ಲಿ *ಮಾರುಕಟ್ಟೆಯಲ್ಲಿ ಕೇಳೋರಿಲ್ಲ ಇಲ್ಲಿನ ಸೀರೆ. *ಹತ್ತಿ ಬೆಳೆಯ ಅಭಾವವೇ ನೇರ ಕಾರಣ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಜು19:`ಉತ್ತರ ಕರ್ನಾಟಕ’ದ ಮ್ಯಾಂಚೆಸ್ಟರ್‍ಗೆ ಈಗ ಮತ್ತೊಂದು ಕಂಟಕ ಎದುರಾಗಿದ್ದು, ಜವಳಿ ಉದ್ದಿಮೆಗೆ ಭಾರಿ ಪೆಟ್ಟು ಬೀಳುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ.
ಬೆಲೆ ಏರಿಕೆ ನೇಕಾರರಿಗೆ ಬರೆಯಾಗುತ್ತಿದೆ. ಮಳೆ ಹಾನಿಯಿಂದಾಗಿ ದೇಶದಲ್ಲಿ ಹತ್ತಿ ಬೆಳೆ ತೀವ್ರ ಕುಸಿತಗೊಂಡಿರುವ ಕಾರಣ ಕಳೆದ ಕಚ್ಚಾ ವಸ್ತುಗಳ ಬೆಲೆ ಶೇ.10 ರಿಂದ 15 ರಷ್ಟು ಏರಿಕೆಯಾಗುವಲ್ಲಿ ಕಾರಣವಾಗಿದೆ. ಕೊರೊನಾ ನಂತರದ ದಿನಗಳಲ್ಲಿ ನೇಕಾರರು ಚೇತರಿಸಿಕೊಳ್ಳುವಷ್ಟರಲ್ಲಿಯೇ ಮತ್ತೊಂದು ಪೆಟ್ಟು ಬಿದ್ದಿದ್ದು, ಇತ್ತ ಮಾರುಕಟ್ಟೆಯಲ್ಲಿ ಸೀರೆಗಳನ್ನು ಕೇಳೋರೇಯಿಲ್ಲದ ಸಂದರ್ಭ ಬೆಲೆ ಏರಿಕೆ ಬಿಸಿ ತುಪ್ಪುವಾಗಿದೆ.
ಮಾರುಕಟ್ಟೆಯಿಲ್ಲ: ಸದ್ಯ ರಾಜ್ಯ ಹಾಗು ಕೇಂದ್ರದಲ್ಲಿ ಇಲ್ಲಿನ ಕಾಟನ್ ಹಾಗು ಮಸರಾಯಿ ಸೀರೆಗಳಿಗೆ ಸಮರ್ಪಕವಾದ ಮಾರುಕಟ್ಟೆ ಇಲ್ಲದ ಕಾರಣ ಈಗಾಗಲೇ ನೇಕಾರ ಮಾಲೀಕರು ವಿದ್ಯುತ್ ಮಗ್ಗಗಳನ್ನು ಶೇ.30 ರಿಂದ 35 ರಷ್ಟು ಸ್ಥಗಿತಗೊಳಿಸಿದ್ದಾರೆ. ಮತ್ತೇ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ನೇಯ್ಗೆ ಪ್ರಮಾಣವೂ ತಗ್ಗುವ ಕಾರಣ ಮತ್ತೆ ನೂರಾರು ಮಗ್ಗಗಳ ಮೌನಗೊಳ್ಳುವ ಭಯದಲ್ಲಿ ಮಾಲಿಕರು ಬದುಕುತ್ತಿದ್ದಾರೆ.
ಆಘಾತಕಾರಿ ಬೆಳವಣಿಗೆ:ರೈತರು ಹತ್ತಿ ಬೆಳೆಯನ್ನು ಕೈಬಿಟ್ಟು ಅನ್ಯ ಬೆಳೆಗಳಿಗೆ ಮೊರೆ ಹೋಗುತ್ತಿರುವ ಕಾರಣ ದೇಶದಲ್ಲಿ ಹತ್ತಿ ಬೆಲೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾಗುತ್ತಿದೆ. ಈ ಕುರಿತು ಸರ್ಕಾರ ಅವಲೋಕನ ನಡೆಸಿ ಹತ್ತಿ ಬೆಳೆಗಾರರ ಪುನಶ್ಚೇತನಕ್ಕೆ ಸಹಾಯ ಹಸ್ತ ನೀಡುವದಲ್ಲದೆ, ಜವಳಿ ಉದ್ದಿಮೆಯನ್ನು ಸಂಕಷ್ಟದಿಂದ ಪಾರು ಮಾಡಲು ಮಧ್ಯಸ್ಥಿಕೆ ವಹಿಸಬೇಕಾದ ಜವಾಬ್ದಾರಿಯಿದೆ.
ಹೊರೆ: ಒಂದೆಡೆ ಕಾರ್ಮಿಕರ ವೇತನ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ನೆಲೆ ಕಾಣದೇ ಮಾಲಿಕರ ಪರದಾಟ. ಇದರಿಂದ ಸೀರೆ ಉದ್ದಿಮೆ ತೀವ್ರ ಸಂಕಷ್ಟದಲ್ಲಿದ್ದು, ಸದ್ಯದ ಕಚ್ಚಾ ವಸ್ತುಗಳ ಖರೀದಿಯಿಂದ ನೇಕಾರರಿಗೆ ಭಾರಿ ಹೊರೆಯಾಗಿದೆ.
`ಜವಳಿಗೆ ಪ್ರಮುಖ ಕಚ್ಚಾ ವಸ್ತುವಾದ ಹತ್ತಿ ಬೆಲೆ ಗಗನಕ್ಕೇರಿರುವ ಕಾರಣ ಜವಳಿ ಉದ್ಯಮ ತೀವ್ರ ತೊಂದರೆ ಎದುರಿಸುವಲ್ಲಿ ಕಾರಣವಾಗಿದೆ. ರಾಜ್ಯ ಹಾಗು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಬೆಲೆ ನಿಯಂತ್ರಣದೊಂದಿಗೆ ಜವಳಿ ಉದ್ಯಮ ಸುಗಮವಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’.--ಬ್ರಿಜ್‍ಮೋಹನ ಡಾಗಾ, ಉಪಾಧ್ಯಕ್ಷರು, ಸೈಜಿಂಗ್ ಹಾಗು ಪಾವರಲೂಮ್ ಮಾಲಿಕರ ಸಂಘ, ಬನಹಟ್ಟಿ.
`ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಚ್ಚಾ ವಸ್ತುಗಳ ಮೇಲೆ ಬೆಲೆ ನಿಯಂತ್ರಣ ಕಾಯ್ದುಕೊಳ್ಳುವಂತ ವ್ಯವಸ್ಥೆ ಮಾಡಬೇಕು. ಕಚ್ಚಾ ವಸ್ತುಗಳ ಖರೀದಿ ಮೇಲೆ ಸರ್ಕಾರ ಶೇ.15 ರಿಂದ 20 ರಷ್ಟು ಸಬ್ಸಿಡಿ ರಿಯಾಯ್ತಿ ಮಾಡಿದರೆ ನೇಕಾರರು ಸ್ವಲ್ಪ ನಿರಾಳವಾಗಬಹುದು.’--ಶಂಕರ ಸೊರಗಾಂವಿ, ಉಪಾಧ್ಯಕ್ಷರು ರಾಜ್ಯ ನೂಲಿನ ಗಿರಣಿ ಮಹಾ ಮಂಡಳ, ಬನಹಟ್ಟಿ.
`ಮಾರುಕಟ್ಟೆ ನೆಲೆ ಕಾಣದೆ ಅಕ್ಷರಸಹ ನೇಕಾರರು ಬೀದಿಗೆ ಬಿದ್ದಿದ್ದಾರೆ. ಸೀರೆ ಬೆಲೆ ಹೆಚ್ಚಳಗೊಳಿಸಬೇಕಾದ ಅನಿವಾರ್ಯತೆ ಇತ್ತ ಮಾರುಕಟ್ಟೆ ಹತೋಟಿಗೆ ಸಿಗುತ್ತಿಲ್ಲ. ಒಟ್ಟಾರೆ ನೇಕಾರ ಬಾಳ್ವೆ ಮೂರಾಬಟ್ಟೆಯಾಗಿದೆ.’----ಸತೀಷ ಹಜಾರೆ, ಪದ್ಮಶ್ರೀ ಸಾರೀಜ್.
`ಹತ್ತಿ ಬೆಲೆ ಮೇಲೆ ಸರ್ಕಾರ ನಿಯಂತ್ರಣ ಹೇರಬೇಕು. ಅಲ್ಲದೆ ವಿದೇಶಕ್ಕೆ ರಫ್ತು ಮಾಡುತ್ತಿರುವದನ್ನು ಇಂತಹ ಸಂದರ್ಭಗಳಲ್ಲಿ ಬಂದ್ ಮಾಡುವ ಮೂಲಕ ದೇಶದ ನೇಕಾರರ ಹಿತ ಕಾಪಾಡುವಲ್ಲಿ ಸರ್ಕಾರ ಮುಂದಾಗಬೇಕು.’----ಸುರೇಶ ಚಿಂಡಕ, ಜವಳಿ ಉದ್ಯಮಿ.

Social Plugin