ತೇರದಾಳ ಪಟ್ಟಣದ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯ ಮೇಲೆ ಚರಂಡಿ ನೀರು.

ಚರಂಡಿ ನಿರ್ಮಾಣ ಮಾಡಲು ಸಾರ್ವಜನಿಕರ ಒತ್ತಾಯ

ತೇರದಾಳ : ಪಟ್ಟಣದ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಚರಂಡಿ ಮಾಡುವಂತೆ ಸಾರ್ವಜನಿಕರು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

  ಮಹಾವೀರ ಸರ್ಕಲ್‍ದಿಂದ ಸರಕಾರಿ ಆಸ್ಪತ್ರೆಯವರೆಗೆ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಲು ಕಳೆದ ಎರಡು ವರ್ಷಗಳ ಹಿಂದೆಯೆ ಅನುದಾನ ಮಂಜೂರಾಗಿದ್ದು ಆ ಅನುದಾನವನ್ನು ಬಳಕೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ರಾಜೇಸಾಬ ನಗಾರ್ಜಿ ದೂರಿದ್ದಾರೆ. ದಿನಾಲು ಬೆಳಿಗ್ಗೆ ಇಲ್ಲಿ ಶೌಚಾಲಯದ ನೀರು ಹಾಗೂ ಬಚ್ಚಲದ ನೀರು ಸೇರಿ ರಸ್ತೆಯ ಮೇಲೆ ಬರುತ್ತದೆ. ರಸ್ತೆಯ ಮೇಲೆ ಬಂದಿರುವ ನೀರು ಎಲ್ಲವೂ ಸೇರಿ ಮಹಾವೀರ ಸರ್ಕಲ್‍ದಲ್ಲಿ ಸಂಗ್ರಹಗೊಂಡು ವಾಹನಗಳು ಆ ನೀರಲ್ಲಿ ದಾಟಿ ಹೋದಾಗ ಅಲ್ಲಿ ಸಂಚರಿಸುವ ಜನರಿಗೆ ಸಿಡಿಯುತ್ತಿದೆ. ಹಾಗೂ ಪ್ರತಿ ರವಿವಾರ ಅಲ್ಲಿ ವಾರದ ಸಂತೆ ಸೇರುತ್ತಿದೆ. ನೀರು ಬಂತೆಂದರೆ ಅಲ್ಲಿ ವ್ಯಾಪಾರಸ್ಥರು ಕುಳಿತುಕೊಳ್ಳಲು ಸಹ ಆಗುತ್ತಿಲ್ಲ. ಇದರಿಂದ ಗುರುಕುಲ ಕಡೆಗೆ, ಸರಕಾರಿ ಆಸ್ಪತ್ರೆಗೆ ಹೋಗುವ ಜನರಿಗೆ ತೊಂದರೆಯಾಗಿದೆ ಅದಕ್ಕಾಗಿ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಶಂಕರಲಿಂಗೇಶ್ವರ ಶಾಲೆಯು ಪುರಸಭೆ ವ್ಯಾಪ್ತಿಯಲ್ಲಿ ಬರುತ್ತಿದೆ. ಅಲ್ಲಿ ಚರಂಡಿ ಮಾಡಿದರೆ ಯಾವುದೇ ತೊಂದರೆ ಇರುವುದಿಲ್ಲ. ಪುರಸಭೆ ಅಧಿಕಾರಿಗಳು ಯಾರದೋ ಹಿತಕ್ಕಾಗಿ ಈ ಚರಂಡಿಯನ್ನು ಮಾಡುವುದನ್ನು ನಿಲ್ಲಿಸಿದ್ದಾರೆ. 

   ರಾಜೇಸಾಬ ನಗಾರ್ಜಿ ಮಾತನಾಡಿ ಈ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದ ಅಭ್ಯರ್ಥಿ ಚುನಾಯಿತವಾದ್ದರಿಂದ ಪುರಸಭೆ ಅಧಿಕಾರಿಗಳು ಆಡಳಿತ ಪಕ್ಷದ ಅಭ್ಯರ್ಥಿಗಳು ಇರುವಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಪುರಸಭೆ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಚರಂಡಿ ನಿರ್ಮಾಣವಾಗದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

  ಈ ಸಂದರ್ಭದಲ್ಲಿ ಶೆಟ್ಟೆಪ್ಪ ಸುಣಗಾರ, ಮುನ್ನಾ ತಾಂಬೋಳಿ, ಅಲ್ಲಾಭಕ್ಷ ನಾಯಿಕವಾಡಿ, ಇಸ್ಮಾಯಿಲ ಮುಲ್ಲಾ, ಗಣಪತಿ ಗಾಡಿವಡ್ಡರ ಸೇರಿದಂತೆ ಇನ್ನಿತರರು ಇದ್ದರು.