ಬನಹಟ್ಟಿಯ ನ್ಯಾಯಾಲಯದಲ್ಲಿ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ನ್ಯಾಯಾಧೀಶೆ ರೇಶ್ಮಾ ಗೋಣಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಹಕ್ಕು, ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು
ರಬಕವಿ-ಬನಹಟ್ಟಿ,ನ26: ಸಂವಿಧಾನವು ನಮಗೆ ನೀಡಿದ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಭಾರತೀಯರಾದ ನಾವು ರಾಷ್ಟ್ರ ಧ್ವಜ, ಗೀತೆ ಮತ್ತು ಲಾಂಛನಕ್ಕೆ ಗೌರವ ನೀಡಬೇಕು ಎಂದು ಸ್ಥಳೀಯ ಹಿರಿಯ ಶ್ರೇಣಿಯ ನ್ಯಾಯಾಧೀಶೆ ರೇಶ್ಮಾ ಗೋಣಿ ತಿಳಿಸಿದರು.
ಅವರು ಗುರುವಾರ ಸ್ಥಳೀಯ ವಕೀಲರ ಸಂಘದ ಕಾರ್ಯಾಲಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಕ್ಕಗಳ ಜೊತೆಗೆ ನಾವು ನಮ್ಮ ಕರ್ತವ್ಯಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಅನೇಕ ಹಕ್ಕಗಳನ್ನು ನೀಡಿರುವ ಸಂವಿಧಾನ ವಾಕ್ ಸ್ವಾತಂತ್ರ್ಯವನ್ನು ನೀಡಿರುವುದು ಶ್ರೇಷ್ಠವಾಗಿದೆ ಎಂದು ನ್ಯಾಯಾಧೀಶೆ ಗೋಣಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿ ಎಸ್.ಎ. ಪಾಟೀಲ ಮಾತನಾಡಿ, ಭಾರತದ ಸಂವಿಧಾನವು ನಮಗೆ ಸಮಾನತೆಯ ಹಕ್ಕುನ್ನು ನೀಡಿದೆ. ಭಾರತೀಯರಾದ ನಾವೆಲ್ಲರೂ ಸಮಾನರು ಎಂಬುದು ಅಂಬೇಡ್ಕರ್ ಅವರ ಆಶವಾಗಿತ್ತು. ಅವರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಇಂದು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಕಿರಿಯ ಶ್ರೇಣಿಯ ನ್ಯಾಯಾಧೀಶ ಮಹೇಶ ಚಂದ್ರಕಾಂತ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಮಸಳಿ ಮತ್ತು ಜಿ.ಡಿ.ಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ದಿನಾಚರಣೆ ಮಹತ್ವ ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ. ಬುರ್ಲಿ, ವೆಂಕಟೇಶ ನಿಂಗಸಾನಿ, ಶಿವಕುಮಾರ ಷಣ್ಮುಖ, ಎಂ.ಜಿ.ಕೆರೂರ, ಸುಜಾತಾ ನಿಡೋಣಿ, ಮಹಾಂತೇಶ ಪದಮಗೊಂಡ, ರವಿ ಸಂಪಗಾವಿ, ಸಿದ್ದು ಭಜಂತ್ರಿ ಸೇರಿದಂತೆ ಅನೇಕರು ಇದ್ದರು.

Social Plugin