ರಬಕವಿ-ಬನಹಟ್ಟಿ ನಗರಸಭೆಯ ಚುಕ್ಕಾಣಿ ಹಿಡಿದ ಬಿಜೆಪಿ ಪಕ್ಷದಿಂದ ನೂತನ ಅಧ್ಯಕ್ಷರಾಗಿ ಶ್ರೀಶೈಲ ಬೀಳಗಿ, ಉಪಾಧ್ಯಕ್ಷರಾಗಿ ಬಾಳವ್ವ ಗಣಪತಿ ಕಾಖಂಡಕಿ ಚುನಾಯಿತಗೊಂಡರು.
ನಗರಸಭೆ ಎದುರು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ ಚಿತ್ರ.

ರಬಕವಿ-ಬನಹಟ್ಟಿ ನಗರಸಭೆ ಪರ್ವತವೇರಿದ `ಶ್ರೀಶೈಲ’
*ಬಿಜೆಪಿಯಿಂದ ವಿಪ್ ಜಾರಿ: ಅಧ್ಯಕ್ಷರಾಗಿ ಬೀಳಗಿ, ಉಪಾಧ್ಯಕ್ಷರಾಗಿ ಕಾಖಂಡಕಿ ಗೆಲುವು
ರಬಕವಿ-ಬನಹಟ್ಟಿ,ನ9: ನಿರೀಕ್ಷೆಯಂತೆ ರಬಕವಿ-ಬನಹಟ್ಟಿ ನಗರಸಭೆಯು ಕಮಲದ ತೆಕ್ಕೆಗೆ ಬಿದ್ದಿದೆ. ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಗರಸಭೆಯ ಚುಕ್ಕಾಣಿಯನ್ನು ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಯಿತು.
ಬೆಳಿಗ್ಗೆ 10 ಗಂಟೆಯಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸಂಜಯ ತೆಗ್ಗಿ, ಪ್ರಭಾಕರ ಮೊಳೇದ, ಶಿವಾನಂದ ಬುದ್ನಿ, ಶ್ರೀಶೈಲ ಬೀಳಗಿ ಹಾಗು ಕಾಂಗ್ರೆಸ್‍ನಿಂದ ಸುರೇಶ ಹಿಪ್ಪರಗಿ ನಾಲ್ವರು ಬಿಜೆಪಿ ಹಾಗು ಓರ್ವ ಕಾಂಗ್ರೆಸ್ ಸದಸ್ಯನಿಂದ ನಾಮಪತ್ರ ಸಲ್ಲಿಕೆಯಾಗಿತ್ತು. ಅದರಂತೆ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಬಾಳವ್ವ ಗಣಪತಿ ಕಾಖಂಡಕಿ, ದುರ್ಗವ್ವ ಭ ಹರಿಜನ ಹಾಗು ಕಾಂಗ್ರೆಸ್‍ನಿಂದ ಹಣಮವ್ವ ಶೆಟ್ಟೆಪ್ಪ ಕಾಮಶೆಟ್ಟಿ ನಾಮಪತ್ರ ಸಲ್ಲಿಸಿದ್ದರು.
ನಂತರ ನಾಮಪತ್ರ ವಾಪಸ್ ಪಡೆಯುವ ಸಮಯದಲ್ಲಿ ಬಿಜೆಪಿಯಿಂದ ನಾಲ್ವರ ಪೈಕಿ ಮೂವರಾದ ಸಂಜಯ ತೆಗ್ಗಿ, ಪ್ರಭಾಕರ ಮೊಳೇದ ಹಾಗು ಶಿವಾನಂದ ಬುದ್ನಿ ಹಿಂಪಡೆದರೆ, ಉಪಾಧ್ಯಕ್ಷ ಸ್ಥಾನದಲ್ಲಿ ಬಿಜೆಪಿಯಿಂದ ಇಬ್ಬರು ಪೈಕಿ ದುರ್ಗವ್ವ ಭ. ಹರಿಜನ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದರು.
ಬಿಜೆಪಿ ಹಾಗು ಕಾಂಗ್ರೆಸ್‍ನಿಂದ ಎರಡೂ ಸ್ಥಾನಗಳಿಗೆ ನೇರ ಸ್ಪರ್ಧೆ ಏರ್ಪಟ್ಟ ಕಾರಣ ನಿರೀಕ್ಷೆಯ ಮತಗಳಾಗಿ ಒಟ್ಟು 31ಸದಸ್ಯರ ಸಂಖ್ಯಾಬಲ ಹೊಂದಿರುವ ನಗರಸಭೆಗೆ 16 ಮತಗಳ ಅವಶ್ಯವಿತ್ತು. ಬಿಜೆಪಿಯಿಂದ 24 ಹಾಗು 2 ಪಕ್ಷೇತರರು ಸೇರಿ ಓರ್ವ ಶಾಸಕ, ಸಂಸದರ ಮತಗಳೂ ಸಹಿತ ಬಿಜೆಪಿ ಅಭ್ಯರ್ಥಿ ಶ್ರೀಶೈಲ ಬೀಳಗಿಯವರಿಗೆ ಒಟ್ಟು 28 ಮತಗಳನ್ನು ಪಡೆದು ಜಯಶಾಲಿಯಾದರು. ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಸುರೇಶ ಹಿಪ್ಪರಗಿ 5 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ಸು ಕಂಡು ಪರಾಭವಗೊಂಡರು.
ಇದೇ ರೀತಿಯ ಮತಗಳನ್ನು ಪಡೆದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಸದಸ್ಯೆ ಬಾಳವ್ವ ಗಣಪತಿ ಕಾಖಂಡಕಿ 28 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಹಣಮವ್ವ ಶೆಟ್ಟೆಪ್ಪ ಕಾಮಶೆಟ್ಟಿ 5 ಮತಗಳನ್ನು ಪಡೆದು ಪರಾಭವಗೊಂಡರು.
ಇದೇ ಸಂದರ್ಭ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಸಮರ್ಪಕ ಅನುದಾನ ಸದ್ಬಳಕೆಯಿಂದ ಹೆಚ್ಚು ಕಾರ್ಯಗಳನ್ನು ಯಶಸ್ವಿಗೊಳಿಸಿ ರಬಕವಿ-ಬನಹಟ್ಟಿ ನಗರಸಭೆಯ ಜನತೆಯ ವಿಶ್ವಾಸದೊಂದಿಗೆ ಸೌಕರ್ಯಗಳನ್ನು ಒದಗಿಸುವ ಮೂಲಕ ಸ್ಥಾನಕ್ಕೆ ಗೌರವಯುತ ಕಾರ್ಯ ನಡೆಸಬೇಕೆಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಚುನಾವಣೆಯು ಯಾವದೇ ಗೊಂದಲ, ಸಮಸ್ಯೆಯಿಲ್ಲದೆ ಬಿಜೆಪಿಯ ಎಲ್ಲ 26 ಸರ್ವ ಸದಸ್ಯರ ವಿಶ್ವಾಸದೊಂದಿಗೆ ಓರ್ವ ವ್ಯಕ್ತಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಪಕ್ಷದ ಸಿದ್ಧಾಂತ ಹಾಗು ಗೌರವಕ್ಕೆ ಮಹತ್ವ ನೀಡುವಲ್ಲಿ ಸದಸ್ಯರು ಯಶಸ್ವಿ ಕಂಡಿದ್ದಾರೆ. ಎಲ್ಲ ಹಿರಿಯರಿಗೂ ಸದಸ್ಯರಿಗೂ ಅಭಿನಂದಿಸುವೆ ಎಂದರು.
ವಿಪ್ ಜಾರಿ: ಅಧ್ಯಕ್ಷ ಸ್ಥಾನಕ್ಕೆ ಶ್ರೀಶೈಲ ಬೀಳಗಿ ಸೇರಿದಂತೆ ಪ್ರಭಾಕರ ಮೊಳೇದ, ಶಿವಾನಂದ ಬುದ್ನಿ ಹಾಗು ದುರ್ಗವ್ವ ಹರಿಜನ ಮಧ್ಯ ತೀವ್ರ ಪೈಪೋಟಿ ಎದುರಾಗಿತ್ತು. ಸಿನಿಮೀಯ ರೀತಿಯಲ್ಲಿ ಪಕ್ಷವು ವಿಪ್ ಜಾರಿಗೊಳಿಸುವಲ್ಲಿ ಯಶಸ್ವಿ ಕಂಡಿತು. ಮತ್ತೊಂದು ವಿಶೇಷವೆಂದರೆ ವಿಪ್ ಜಾರಿ ಸಂದರ್ಭ ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ನಿರಾಕರಿಸಿದರ ಹಿನ್ನಲೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲರಿಂದ ವಿಪ್ ಜಾರಿಗೊಳಿಸುವಲ್ಲಿ ಪಕ್ಷವು ಯಶಸ್ವಿಯಾಯಿತು.
ಅನರ್ಹತೆ ಭೀತಿಯಿಂದ ಮತದಾನ: ವಿಪ್ ಉಲ್ಲಂಘಿಸಿದರೆ ಕರ್ನಾಟಕ ಲೋಕಲ್ ಅಥಾರಿಟಿ ಆಕ್ಟ್ 1987 ಇದರ ಪ್ರಯುಕ್ತ ಸದಸ್ಯತ್ವ ಸ್ಥಾನದಿಂದ ಅನರ್ಹವಾಗುವದು ನಿಶ್ಚಿತದಿಂದಾಗಿ, ಕಡ್ಡಾಯವಾಗಿ ಪಕ್ಷ ತೀರ್ಮಾಣಿಸಿದ ವ್ಯಕ್ತಿಗೆ ಮತ ಚಲಾಯಿಸುವದು ಅನಿವಾರ್ಯ ಕಾರಣ ಚುನಾವಣೆ ಸರಾಗವಾಗಲು ಕಾರಣವಾಯಿತು.
ಇದೇ ಸಂದರ್ಭ ಚುನಾವಣಾಧಿಕಾರಿಯಾಗಿ ಡಾ. ಸಿದ್ದು ಹುಲ್ಲೋಳ್ಳಿ ಅಧಿಕೃತವಾಗಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ತೊಡಗಿದ್ದರು. ಪೌರಾಯುಕ್ತ ಶ್ರೀನಿವಾಸ ಜಾಧವ, ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.