ಚರಂಡಿಯನ್ನು ಪೂರ್ಣಗೊಳಿಸುವಂತೆ ಪೌರಾಡಳಿತ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ
ತೇರದಾಳ : ಕ್ವಾಣಿ ಹಳ್ಳ(ಚರಂಡಿ)ಪೂರ್ಣಗೊಳಿಸುವಂತೆ ಪಟ್ಟಣ ಸಮಸ್ತ ದಲಿತ ನಿವಾಸಿಗಳು ಪೌರಾಡಳಿತ ಹಾಗೂ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
  ಪಟ್ಟಣದಲ್ಲಿ ಸುಮಾರು 40ರಿಂದ 50 ಸಾವಿರ ಜನಸಂಖ್ಯೆ ಹೊಂದಿದ್ದು, ಈ ಜನರಿಂದ ಸುಮಾರು 4ರಿಂದ5ಲಕ್ಷ ಲೀಟರ್ ನಿರುಪಯುಕ್ತ ನೀರು ಹರಿದು ಚರಂಡಿ ಮೂಲಕ ಬಂದು ಕ್ವಾಣಿ ಹಳ್ಳ ಸೇರುತ್ತದೆ. ಈ ನೀರು ಕ್ವಾಣಿ ಹಳ್ಳ ತಲಾತಲಾಂತರದಿಂದ ಇದೊಂದು ದೊಡ್ಡ ಪ್ರಮಾಣದ ಹಳ್ಳವಾಗಿದೆ. ಈ ಹಳ್ಳಕ್ಕೆ ಸಮಸ್ತ ಪಟ್ಟಣದ ಜನತೆಯ ನೀರು ಚರಂಡಿ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಮೊದಲು ಈ ನೀರು ಹರಿದು ಅಜನಾಳವನ್ನು ಸೇರುತ್ತಿತ್ತು. ಸದರಿ ಚರಂಡಿ ನೀರು ಹೋಗಲು ಶ್ರೀಬ್ರಹ್ಮಾನಂದ ದೇವಸ್ಥಾನದಿಂದ ನಿರ್ಮಿಸಿಕೊಂಡು ಬಂದು ಅಂಬೇಡ್ಕರ್ ಸರ್ಕಲ್‍ದವರೆಗೆ ಮಾತ್ರ ತಂದು ನಿಲ್ಲಿಸಲಾಗಿದೆ. ಚರಂಡಿ ನೀರು ಹೋಗುವಂತೆ ಅಜನಾಳದವರೆಗೆ ಚರಂಡಿ ನಿರ್ಮಿಸ ಬೇಕಾಗಿತ್ತು. ಆದರೆ ಪಟ್ಟಬದ್ದ ಹಿತಾಶಕ್ತಿಗಳ ಒತ್ತಾಯದಿಂದ ಈ ಚರಂಡಿ ಅರ್ಧಕ್ಕೆ ನಿಲ್ಲಿಸಿ ಅಪೂರ್ಣಗೊಳಿಸಲಾಗಿದೆ. 
   ಈ ಕ್ವಾಣಿ ಹಳ್ಳದ ಚರಂಡಿಗೆ ಪಟ್ಟಣದ ಸುಮಾರು 15ರಿಂದ 20 ಸಾರ್ವಜನಿಕ ಮೂತ್ರಾಲಯಗಳನ್ನು ಜೋಡಿಸಲಾಗಿದೆ.  ಈ ಹಳ್ಳದ ಮುಖಾಂತರ ಮಲ, ಮೂತ್ರ ಪ್ರತಿನಿತ್ಯ ಹರಿದು ಬಂದು ಸ್ಲಂ(ಅಂಬೇಡ್ಕರ ಸರ್ಕಲ್) ಪ್ರದೇಶದಲ್ಲಿ ಬಂದು ನಿಲ್ಲುತ್ತದೆ. ಕೆಲವೊಮ್ಮೆ ಮಳೆ ಬಂದಾಗ ಈ ಎಲ್ಲ ಹೊಲಸು ಮನೆ ಬಾಗಿಲಿಗೆ ಬರುತ್ತದೆ ಇದರಿಂದ ಇಲ್ಲಿನ ಎಲ್ಲ ನಿವಾಸಿಗಳಿಗೆ ಸಾಕಾಗಿ ಹೋಗಿದೆ. 
  ಕೊಳಚೆ ಪ್ರದೇಶದಲ್ಲಿ ಸುಮಾರು 10ರಿಂದ 15ಸಾವಿರ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಚರಂಡಿ ನೀರು ನಿಂತು ಗಬ್ಬೆದ್ದು ನಾರುತ್ತಿದೆ ಮತ್ತು ಸೊಳ್ಳೆಗಳ ವಾಸ ಸ್ಥಾನವಾಗಿದೆ. ಇಲ್ಲಿ ವಾಸಿಸಲು ಅಸಾಧ್ಯವಾಗಿದೆ. ಈ ಪ್ರದೇಶ ಸಾಂಕ್ರಾಮಿಕ ರೋಗಗಳ ಸ್ಥಾನವಾಗಿದೆ ಇದರಿಂದ ಮಕ್ಕಳು ಹಾಗೂ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
   ಪ್ರತಿ ವರ್ಷ ಸುರಿಯುತ್ತಿರುವ ಮಳೆಗೆ ಚರಂಡಿಗಳೆಲ್ಲವೂ ತುಂಬಿ ಈ ನಮ್ಮ ಸ್ಲಂ ಪ್ರದೇಶದಲ್ಲಿ ಬಂದು ಜಮಾವಣೆಗೊಂಡು ಇಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿರುವುದು ಹಾಗೂ ಮಳೆಗಾಲ ಬಂದಿತೆಂದರೆ ಇಲ್ಲಿನ ಜನರು ನಿದ್ದೆಯಿಲ್ಲದೆ ರಾತ್ರಿಯೆಲ್ಲ ಜಾಗರಣೆ ಮಾಡಬೇಕಾಗುತ್ತದೆ. ಮೇಲಾಧಿಕಾರಿಗಳು ಈ ನಮ್ಮ ಸ್ಲಂ ಪ್ರದೇಶಕ್ಕೆ ಭೇಟಿ ನೀಡಿ ಈ ಸಮಸ್ಯೆಗೆ ಶಾಸ್ವತ ಪರಿಹಾರವನ್ನು ಕಂಡುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದು ಹೀಗೆಯೆ ಮುಂದುವರೆದರೆ ಕೊಳಚೆ ಪ್ರದೇಶದ ಎಲ್ಲ ಜನರು ಉಪವಾಸ ಸತ್ಯಾಗ್ರಹದೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಮೇಶ ಧರೆನ್ನವರ, ನಾಗಪ್ಪ ದೊಡಮನಿ, ವಿದ್ಯಾನಂದ ಧರೆನ್ನವರ, ಚಂದ್ರಕಾಂತ ದೊಡಮನಿ, ಸುಭಾಸ ಶಿಂಗೆ, ಕುಮಾರ ಘಟ್ಟೆನ್ನವರ, ಉಮೇಶ ದೊಡಮನಿ, ಗುಣವಂತ ರೋಡಕರ, ಶ್ರೀನಾಥ ಗೋಟಡಕಿ, ವಿಠ್ಠಲ ದೊಡಮನಿ, ಅಣ್ಣಪ್ಪಾ ವಾಜಂತ್ರಿ, ಪರಶುರಾಮ ಭಜಂತ್ರಿ, ಮಂಜುನಾಥ ಕಾಂಬಳೆ, ಸಾವಂತ ಮಾಂಗ, ರವೀಂದ್ರ ಸವದಿ ಸೇರಿದಂತೆ ನೂರಾರು ಜನರು ಪತ್ರದಲ್ಲಿ ತಿಳಿಸಿದ್ದಾರೆ.