ರಬಕವಿಯಲ್ಲಿ ನಡೆದ ರೈತ ಜಾಗೃತಿ ಸಭೆಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಉದ್ಘಾಟಿಸಿದರು.

ನೆಪ ಬಿಟ್ಟು ರೈತರ ಪರಿಹಾರ ಒದಗಿಸಲು ಸರ್ಕಾರಕ್ಕೆ ಒತ್ತಾಯ
*ರೈತ ಹಾಗು ಜನವಿರೋಧಿ ಕಾಯ್ದೆ ಕೈಬಿಡಲೇಬೇಕು
ರಬಕವಿ-ಬನಹಟ್ಟಿ,ನ8: ಕಳೆದೆರಡು ವರ್ಷಗಳಿಂದ ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ 21.5 ಕೋಟಿ ರೂ.ಗಳಷ್ಟು ಕಬ್ಬಿನ ಬಾಕಿ ಹಣ ವಸೂಲಿಗೆ ಸರ್ಕಾರ ಮಧ್ಯಸ್ಥಿಕೆ ವಹಿಸಿದ್ದಷ್ಟೇ ಆದರೆ ಯಾವದೇ ಪರಿಹಾರ ಒದಗಿಸದೆ ಕಾಲಹರಣ ಮಾಡುತ್ತ ರೈತರನ್ನು ಮತ್ತಷ್ಟು ಸಾಲಕ್ಕೆ ನೂಕುವಂತೆ ಮಾಡುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಸರ್ಕಾರದ ವಿರುದ್ಧ ಹರಿಹಾಯ್ದರು.
ಇಂದು ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ರೈತರ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತತ್‍ಕ್ಷಣವೇ ಸಿಎಂ ಹಾಗು ಸಕ್ಕರೆ ಸಚಿವರ ಆದಿಯಾಗಿ ಸರ್ಕಾರವೇ ಮುಂದೆ ನಿಂತು, ಯಾವದೇ ನೆಪವೊಡ್ಡದೆ ನೇರವಾಗಿ ರೈತರಿಗೆ ಪರಿಹಾರ ಒದಗಿಸಬೇಕು. ಈ ಕುರಿತು ಸ್ಥಳೀಯ ಜಿಲ್ಲಾಧಿಕಾರಿಗಳು ಸರ್ಕಾರದ ಗಮನಸೆಳೆದು ರೈತರ ಆಕ್ರೋಶವನ್ನು ಪರೀಕ್ಷೆ ಮಾಡಬಾರದೆಂದು ಕಾಂಬಳೆ ಖಡಕ್ ಸಂದೇಶ ರವಾನಿಸಿದರು.
ರಾಜ್ಯ ಹಾಗು ಕೇಂದ್ರ ಸರ್ಕಾರಗಳು ರೈತರ ಹಾಗು ಜನಸಾಮಾನ್ಯರ ವಿರುದ್ಧ ಕ್ರಮಗಳನ್ನು ಕೈಗೊಂಡು ಭೂಸುಧಾಣೆ, ವಿದ್ಯುತ್ ಖಾಸಗೀಕರಣ, ಕಾರ್ಮಿಕ ಕಾಯ್ದೆ ಇವೆಲ್ಲವೂ ಜನಸಾಮಾನ್ಯರ ಹಾಗು ರೈತ ವಿರೋಧಿಯ ಕಾರ್ಯಗಳಾಗಿವೆ ಇವೆಲ್ಲವನ್ನು ಕೈಬಿಡಬೇಕೆಂದು ಕಾಂಬಳೆ ಸರ್ಕಾರಗಳನ್ನು ಒತ್ತಾಯಿಸಿದರು.
ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ಅದರಲ್ಲೂ ವಾಣಿಜ್ಯ ಬೆಳೆಗಳ ಹಾನಿಯಿಂದ ರೈತರು ಬದುಕು ತೀರಾ ಹದಗೆಟ್ಟಿದೆ. ಕೂಡಲೇ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿ ಅಳಿದುಳಿದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವದರ ಜೊತೆಗೆ ಪ್ರಮುಖವಾಗಿ ಹಾಳಾದ ಬೆಳೆಗಳನ್ನು ಪರಿಶೀಲಿಸಿ ಅದರ ಅರ್ಧದಷ್ಟಾದರೂ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಬಸವರಾಜ ಬಾಳಿಕಾಯಿ ಮಾತನಾಡಿ, ರೈತರ ಕಷ್ಟಗಳಿಗೆ ಆಡಳಿತ ಅಥವಾ ವಿರೋಧ ಪಕ್ಷಗಳ ಯಾವದೇ ರಾಜಕಾರಣಿ ಇತ್ತ ಸುಳಿಯದಿರುವದು ವಿಪರ್ಯಾಸದ ಸಂಗತಿಯಾಗಿದೆ.
ರೈತರ ಸಮಸ್ಯೆ ಅದರಲ್ಲೂ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಕಷ್ಟಗಳಿಗೆ ಹೋರಾಡುತ್ತಿರುವ ರೈತರಿಗೆ ಬೆಂಬಲವಾಗುವಲ್ಲಿ ರಾಜಕೀಯ ಮುಖಂಡರು ಹಿಂದೇಟು ಹಾಕುತ್ತಿರುವದು ರೈತರಿಗೆ ಮಾಡುತ್ತಿರುವ ಮಹಾನ್ ಮೋಸವೆಂದು ಗುಡುಗಿದರು.
ಸಸಾಲಟ್ಟಿ ಏತ ನೀರಾವರಿ ಸೇರಿದಂತೆ ಅನೇಕ ನೀರಾವರಿ ಸೌಲಭ್ಯಗಳ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ನಡೆಯಲಿವೆ ಎಂದು ಬಾಳಿಕಾಯಿ ತಿಳಿಸಿದರು.
ವೇದಿಕೆ ಮೇಲೆ ರೈತ ಮುಖಂಡರಾದ ವೆಂಕಟೇಶ್, ತಾಲೂಕಾಧ್ಯಕ್ಷ ಶ್ರೀಕಾಂತ ಗುಳ್ಳನವರ, ಗಂಗಾಧರ ಮೇಟಿ, ಹೊನ್ನಪ್ಪ ಬಿರಡಿ, ಅಥಣಿ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ, ರೇವಣಯ್ಯ ಹಿರೇಮಠ, ಮಗೆಪ್ಪ ತೇರದಾಳ, ನಾಗಪ್ಪ ಜಗದಾಳ, ಸಿದ್ದು ಬಣಜನವರ, ಸುರೇಶ ಚಿಂಚಲಿ, ಮಾರುತಿ ಅರೆನಾಡ, ಶಂಕರ ಉರಭಿನವರ, ಶಂಕರ ಚಿಂಚಲಿ, ಈರಗೊಂಡ ಪಾಟೀಲ ಇದ್ದರು.
ಸುರೇಶ ಢವಳೇಶ್ವರ, ಸಿದ್ದು ಉಳ್ಳಾಗಡ್ಡಿ, ಸಂಗಪ್ಪ ಮೇಟಿ, ಮಹಾದೇವ ಪಾಟೀಲ, ದುಂಡಪ್ಪ ಜಿಡ್ಡಿಮನಿ, ಕಾಡು ಪಾಟೀಲ, ರಾಜು ಲೋಕ್ಕನ್ನವರ, ನಾಗಪ್ಪ ಬಂದೆನ್ನವರ, ಅಯ್ಯಪ್ಪ ಹುಂದರಗಿ, ಸಿದ್ದು ಒಡೆಯರ, ಸದಾಶಿವ ಉಳ್ಳಾಗಡ್ಡಿ, ಯಲ್ಲಪ್ಪ ಕರಿಗಾರ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.