ಬನಹಟ್ಟಿಯಲ್ಲಿ ನಡೆದ ರೈತ ಸಂಘದ ಮುಖಂಡರ ಸುದ್ದಿಗೋಷ್ಠಿಯಲ್ಲಿ ಜನ ಸಾಮಾನ್ಯರ ಪಕ್ಷದ ಮುಖಂಡ ಯಲ್ಲಪ್ಪ ಹೆಗ್ಗಡೆ ಮಾತನಾಡಿದರು.

ಕುಲಹಳ್ಳಿ ಗ್ರಾಮದ ಮನೆಗಳ ಪುನರ್ ಸರ್ವೆಗಾಗಿ ಆಗ್ರಹ
* ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿದ್ದಾರೆ
ರಬಕವಿ-ಬನಹಟ್ಟಿ,ನ14: ರಬಕವಿ ಬನಹಟ್ಟಿ ತಹಶೀಲ್ದಾರರು ಸರ್ಕಾರದ ಕೈಗೊಂಬೆಯಾಗಿದ್ದು, ಅವರು ಕುಲಹಳ್ಳಿ ಗ್ರಾಮದ ಮಳೆಯಿಂದ ಬಿದ್ದ ಮನೆಗಳ ಸರ್ವೆ ಕಾರ್ಯವನ್ನು ಸರಿಯಾಗಿ ಮಾಡಿಲ್ಲ. ಆದ್ದರಿಂದ ತಮ್ಮದೆ ಆದೇಶದಂತೆ ಆದಷ್ಟು ಬೇಗನೆ ಸರ್ವೆ ಕಾರ್ಯವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಕುರಿತು ಪ್ರತಿಭಟನೆಯನ್ನು ಕೈಗೊಳ್ಳಲಾಗುತ್ತದೆ ಎಂದು ಕುಲಹಳ್ಳಿ ಗ್ರಾಮ ಜನ ಸಾಮಾನ್ಯ ಪಕ್ಷದ ಮುಖಂಡ ಯಲ್ಲಪ್ಪ ಹೆಗಡೆ ತಿಳಿಸಿದರು.
ಅವರು ಶನಿವಾರ ಸ್ಥಳೀಯ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 118 ಮನೆಗಳಲ್ಲಿ ವಾಸವಿಲ್ಲ ಎಂದು ಸರ್ವೆ ಮಾಡಲಾಗಿದೆ. ಬಿದ್ದ ಮನೆಗಳಲ್ಲಿ ವಾಸ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಕುರಿತು ತಹಶೀಲ್ದಾರ್ ಕುರಿತು ಗಮನಕ್ಕೆ ತಂದಾಗ ಅವರು ದಿ.3.11.2020 ರಂದು ಮತ್ತೊಂದು ಆದೇಶ ಮಾಡಿ ಈ ಮನೆಗಳ ಪುನರ್ ಸರ್ವೆ ಮಾಡಬೇಕು ಎಂದು ಆದೇಶ ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೆ ಸರ್ವೆ ಕಾರ್ಯ ನಡೆದಿಲ್ಲ ಎಂದು ತಿಳಿಸಿದರು.
ಕಳೆದ ಬಾರಿಯ ನೆರೆ ಹಾವಳಿಯ ಸಂದರ್ಭದಲ್ಲಿ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಜನ ಮತ್ತು ಜಾನುವಾರಗಳಿಗೆ ಪುನರ್ ವಸತಿಗಳನ್ನು ನಿರ್ಮಾಣ ಮಾಡಲು 90 ಶೆಡಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಎಲ್ಲ ಟೆಂಡರ್ ಗಳನ್ನು ಸ್ಥಳೀಯ ಶಾಸಕರ ಸಂಬಂಧಿಕರಿಗೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಬಳಸಲಾದ ವಸ್ತುಗಳು ಕಳಪೆ ಗುಣಮಟ್ಟದ್ದಾಗಿದ್ದವು ಎಂದು ಹೆಗಡೆ ಆರೋಪಿಸಿದರು.
ಇದೇ ಸಂದರ್ಭದಲ್ಲಿ ಸೀತಾರಾಮ ಮಾದರ ಮಾತನಾಡಿ, ಕುಲಹಳ್ಳಿ ಗ್ರಾಮದಲ್ಲಿ 163 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಆದರೆ ಇದರಲ್ಲಿ ಎಲ್ಲವುಗಳನ್ನು ಪರಿಗಣಿಸಿಲ್ಲ. ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಮತ್ತು ಪರಿಹಾರ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ. ಈ ಸಂಬಂಧವಾಗಿ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗಿತ್ತು. ಮನೆಗಳ ಸರ್ವೆ ಕಾರ್ಯವನ್ನು ಪುನರ್ ನಡೆಸಲಾಗುವುದು ಎಂದು  ಭರವಸೆಯನ್ನು ನೀಡಿದಾಗ ಪ್ರತಿಭಟನೆಯನ್ನು ಕೈಬಿಡಲಾಗಿತ್ತು ಎಂದು ತಿಳಿಸಿದರು. 
ರೈತ ಸಂಘದ ಮತ್ತೊರ್ವ ಮುಖಂಡ ತುಕಾರಾಮ ಮ್ಯಾಗಿನಮನಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಬಿದ್ದ ಪ್ರತಿಯೊಂದು ಮನೆಗೆ ಪರಿಹಾರ ನೀಡಿ ಎಂದು ಹೇಳಿದಾಗ ಸರ್ಕಾರಿ ಅಧಿಕಾರಿಗಳು ಈ ನಿಟ್ಟಿನಲ್ಲಿ ತಾರತಮ್ಯ ಎಸಗುತ್ತಿದ್ದಾರೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಸರ್ಕಾರದ ಕೈಗೊಂಬೆಗಳಾಗಿದ್ದಾರೆ ಎಂದರು. 
ಈ ಸಂದರ್ಭದಲ್ಲಿ ಕುಲಹಳ್ಳಿ ಗ್ರಾಮ ರೈತ ಸಂಘದ ಮುಖಂಡ ರವಿ ತೇಲಿ ಇದ್ದರು.