ಬನಹಟ್ಟಿಯ ಲಕ್ಷ್ಮಿ ನಗರ ಬಡಾವಣೆಗೆ ಭೇಟಿ ನೀಡಿದ ಪೌರಾಯುಕ್ತ ಶ್ರೀನಿವಾಸ ಜಾಧವ ಅಲ್ಲಿಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ಒಣ ಕಸ ಹಸಿ ಕಸ ಬೇರೆ ಮಾಡಿ ಕೊಡಿ
ರಬಕವಿ-ಬನಹಟ್ಟಿ,ನ11:ಸ್ಥಳೀಯ ನಗರಸಭೆಯ ವ್ಯಾಪ್ತಿಯಲ್ಲಿಯ ಸಾರ್ವಜನಿಕರು ಮನೆಯಲ್ಲಿಯ ಒಣ ಕಸ ಮತ್ತು ಹಸಿ ಕಸವನ್ನು ಬೇರೆ ಬೇರೆ ಮಾಡಿ ನೀಡಿದರೆ ಸಾರ್ವಜನಿಕರಗೆ ಅನುಕೂಲವಾಗುತ್ತದೆ. ನಗರಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಸ್ಥಳೀಯ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ಅವರು ಬುಧವಾರ ಸ್ಥಳೀಯ ಲಕ್ಷ್ಮಿ ನಗರ ಬಡಾವಾಣೆಗೆ ಭೇಟಿ ನೀಡಿ ಅಲ್ಲಿಯ ಜನರ ಸಮಸ್ಯೆಗಳನ್ನು ಆಲಿಸಿ ಪತ್ರಿಕೆಯ ಜೊತೆಗೆ ಮಾತನಾಡಿದರು.
ಅದೇ ರೀತಿಯಾಗಿ ಪ್ರತಿಯೊಂದು ಮನೆಯವರು ಒಳ ಚರಂಡಿಯ ಯೋಜನೆಯ ಸಂಪರ್ಕವನ್ನು ಪಡೆದುಕೊಳ್ಳಬೇಕು. ಸಾರ್ವಜನಿಕರು ಇವೆರಡು ಕಾರ್ಯಗಳನ್ನು ಆದಷ್ಟು ಬೇಗನೆ ಮಾಡಿದರೆ ನಗರಸಭೆಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಇಲ್ಲಿಯ ಬಡಾವಣೆಯ ಕೆಲವು ಖಾಲಿ ನಿವೇಶನಗಳಲ್ಲಿ ಅಪಾರ ಪ್ರಮಾಣದ ಗಿಡಗಳು ಮುಳ್ಳು ಕಂಟಿಗಳು ಬೆಳೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ನಿವೇಶನದ ಮಾಲೀಕರು ಕೂಡಲೇ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಅಂಥವರಿಗೆ ನೋಟಿಸ್ ನೀಡುವುದರ ಜೊತೆಗೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ಇಲ್ಲಿ ಅನೇಕ ಕಡೆಗಳಲ್ಲಿ ರಸ್ತೆಗಳು 24*7 ಯೋಜನೆ ಮೂಲಕ ಹದಗೆಟ್ಟಿವೆ. ಅವುಗಳನ್ನು ದುರಸ್ತಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು. 
ಕೋವಿಡ್-19 ನಿಂದಾಗಿ ಮತ್ತು ಇತ್ತೀಚಿನ ಅತಿವೃಷ್ಠಿಯಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಧಾನವಾಗಿ ನಡೆಯುತ್ತಿವೆ ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಬಿ.ಸುಗ್ಗಮದ, ಶಶಿಕಾಂತ ಹುನ್ನೂರ, ಪ್ರಕಾಶ ಹೋಳಗಿ, ರಮೇಶ ಮಂಡಿ, ಚಂದ್ರ ಗೊಂಬಿ, ಪ್ರದೀಪ ಗಿಡದಾನಪ್ಪಗೋಳ, ಕೆ.ಎಚ್. ಸಿನ್ನೂರ, ಬಿ.ಆರ್. ಗೊಡ್ಡಾಳೆ ಸೇರಿದಂತೆ ಅನೇಕರು ಇದ್ದರು.