ಬನಹಟ್ಟಿಯ ವಕೀಲರ ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ರೇಶ್ಮಾ ಗೋಣಿ ಮಾತನಾಡಿದರು.

ವಕೀಲಿ ವೃತ್ತಿಯನ್ನು ಸಮಾಜ ಸೇವೆಗಾಗಿ ಬಳಸಿಕೊಳ್ಳಿ
ರಬಕವಿ-ಬನಹಟ್ಟಿ,ನ11:ವಕೀಲ ವೃತ್ತಿಯು ಅತ್ಯಂತ ಜವಾಬ್ದಾರಿಯುತವಾದ ವೃತ್ತಿಯಾಗಿದೆ. ವಕೀಲರು ತಮ್ಮ ವೃತ್ತಿಯನ್ನು ಸಮಾಜ ಸೇವೆಗಾಗಿ ಬಳಸಿಕೊಳ್ಳಬೇಕು ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ರೇಶ್ಮಾ ಗೋಣಿ ತಿಳಿಸಿದರು.
ಸ್ಥಳೀಯ ವಕೀಲರ ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ವಕೀಲರು ಅಚ್ಚುಕಟ್ಟಾಗಿ ವಕೀಲಿ ವೃತ್ತಿಯನ್ನು ಕೈಗೊಳ್ಳುವುದರ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಕಿರಿಯ ವಕೀಲರು ಹಿರಿಯ ವಕೀಲರಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ವಕೀಲ ಕೆ.ಡಿ.ತುಬಚಿ ಮಾತನಾಡಿ, ಸಂವಿಧಾನದ ಆಶಯದಂತೆ ಬಡವರಿಗೆ, ಮಹಿಳೆಯರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಕೂಲಿ ಕಾರ್ಮಿಕರಿಗೆ, ಪ್ರಕೃತಿ ವಿಕೋಪಕ್ಕೆ ಒಳಗಾದ ಜನರಿಗೆ ಉಚಿತ ಕಾನೂನು ಸೇವೆಯನ್ನು ನೀಡುವ ಅವಶ್ಯಕತೆ ಇದೆ ಎಂದರು.
ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರೆಯಬೇಕು ಮತ್ತು ಯಾವುದೆ ವ್ಯಕ್ತಿ ನ್ಯಾಯದಿಂದ ವಂಚಿತರಾಗಬಾರದು. ಅವರೆಲ್ಲರಿಗೂ ಕಾನೂನು ಸೇವೆ ದೊರೆಯುವ ನಿಟ್ಟಿನಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು. ಸಮಾರಂಭದ ವೇದಿಕೆಯ ಮೇಲೆ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ ಇದ್ದರು.
ಅರ್ಜುನ ಜಿಡ್ಡಿಮನಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಂ.ಜಿ. ಕೆರೂರ, ಸುರೇಶ ಗೊಳಸಂಗಿ, ಈಶ್ವರಚಂದ್ರ ಭೂತಿ, ಮಹಾಂತೇಶ ಪದಮಗೊಂಡ, ಬಿ.ಆರ್. ಯಲ್ಲಟ್ಟಿ, ಶಶಿಧರ ಮೋಪಗಾರ ಸೇರಿದಂತೆ ಅನೇಕರು ಇದ್ದರು.