ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀ ಮನೆಯ ಮುಂದೆ ಪರಿಶೀಲನೆ ನಡೆಸುತ್ತಿರುವ ಸಿಪಿಐ ಕರುಣೇಶಗೌಡ ನೇತೃತ್ವದ ತಂಡ
ಮಾಜಿ ಸಚಿವೆ, ನಟಿ ಉಮಾಶ್ರೀ ಮನೆ ಬಾಗಿಲು ಮುರಿದು ಕಳ್ಳತನ
-ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮಾಜಿ ಸಚಿವೆ, ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ, ಚಿತ್ರ ನಟಿ ಉಮಾಶ್ರೀ ಅವರ ನಿವಾಸದಲ್ಲಿ ಭಾನುವಾರ ತಡರಾತ್ರಿ ಕಳ್ಳತನ ನಡೆದಿದೆ.
ಮನೆಯ ಬಾಗಿಲು ಮುರಿದು, ಅಪಾರ ಪ್ರಮಾಣದ ವಸ್ತು ಮತ್ತು ಹಣ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆ ಬನಹಟ್ಟಿ ಸಿಪಿಐ ಕರುಣೇಶಗೌಡ ಹಾಗೂ ತೇರದಾಳ ಠಾಣಾಧಿಕಾರಿ ವಿಜಯ ಕಾಂಬಳೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಉಮಾಶ್ರೀ ಬೆಂಗಳೂರಿನಿಂದ ರಬಕವಿಗೆ ಬರುತ್ತಿದ್ದು, ಅಲ್ಲಿ ಮುಟ್ಟಿದ ನಂತರವೇ ಕಳ್ಳತನವಾಗಿರುವ ಹಣ, ವಸ್ತುಗಳ ನಿಖರ ಪ್ರಮಾಣ ಲಭ್ಯವಾಗಲಿದೆ.
ಉಮಾಶ್ರೀಯವರು ಇನ್ನೂ ಬಂದಿಲ್ಲ. ಅವರು ಬಂದ ಮೇಲೆ ಏನೇನು ಹೋಗಿದೆ ಅನ್ನುವುದು ಗೊತ್ತಾಗುತ್ತದೆ. ಜಿಲ್ಲೆಯ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ತನಿಖೆ ಮುಂದುವರೆದಿದೆ. ಆದಷ್ಟು ಬೇಗನೆ ಪತ್ತೇ ಹಚ್ಚಲಾಗುವುದು ಎಂದು ತನಿಖಾಧಿಕಾರಿ ಸಿಪಿಐ ಕರುಣೇಶಗೌಡ ತಿಳಿಸಿದ್ದಾರೆ.
ತೇರದಾಳ ಪೊಲೀಸ್ ಠಾಣೆಯ ರಬಕವಿ ಓಪಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Social Plugin