■ 61 ವರ್ಷಗಳ ಹಿಂದೆಯೇ 8 ಭಾಷೆಗಳಿಗೆ ಡಬ್ ಆಗಿದ್ದ ರಾಜ್ ಸಿನಿಮಾ : 'ಮಹಿಷಾಸುರ ಮರ್ಧಿನಿ'! ■
-ಲೇಖನ : ಹಿರಿಯ ಸಿನಿಮಾ ಪತ್ರಕರ್ತರು ಶ್ರೀ ಗಣೇಶ ಕಾಸರಗೋಡು
● 'ಬೆಳ್ಳಿತೆರೆಯ ಬಂಗಾರದ ಗೆರೆ' ಅಂಕಣದ ಸ್ಯಾಂಪಲ್
ಇತ್ತೀಚೆಗೆ ವಿಜಯ್ ಸೇತುಪತಿ ನಟಿಸಿದ '96' ಎಂಬ ಹೆಸರಿನ ತಮಿಳು ಸಿನಿಮಾವೊಂದನ್ನು ನೋಡಿದೆ. ನಂತರ ಇದೇ ಸಿನಿಮಾ '99' ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಆಗಿ ಬಂತು. ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ ಈ ಸಿನಿಮಾವನ್ನೂ ನೋಡಿದೆ. ಮೊನ್ನೆ ಇದೇ ಸಿನಿಮಾದ ತೆಲುಗು ಅವತರಣಿಕೆಯ ಕನ್ನಡ ಡಬ್ಬಿಂಗ್'ನ ಪ್ರೋಮೋವನ್ನೂ ನೋಡಿದೆ! ಎಂಥಾದ್ದು ಮಾರ್ರೇ ಇದೂ? ನಾವು ಎಲ್ಲಿದ್ದೇವೆ? ಕನ್ನಡ ಚಿತ್ರರಂಗ ಎಲ್ಲಿಗೆ ಬಂದು ಮುಟ್ಟಿತು? ಬೇಸರವಾಗುತ್ತಿದೆ ಗೆಳೆಯರೇ... ಟಿವಿ ಧಾರಾವಾಹಿಗಳ ಡಬ್ಬಿಂಗ್ ಹಾವಳಿಯಂತೂ ಮೇರೆ ಮೀರಿದೆ. ಈ ಎಲ್ಲದರ ನಡುವೆ 61 ವರ್ಷಗಳ ಹಿಂದೆ ಕನ್ನಡದ ಸಿನಿಮಾವೊಂದು 8 ಭಾಷೆಗಳಿಗೆ ಡಬ್ ಆಗಿ ಅಷ್ಟೂ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿರುವ ಹೆಮ್ಮೆಯ ಸಂಗತಿಯೊಂದನ್ನು ಹೇಳಲು ನಿಮ್ಮ ಮುಂದೆ ಕೂತಿದ್ದೇನೆ :
ಆ ಸಿನಿಮಾದ ಹೆಸರು : 'ಮಹಿಷಾಸುರ ಮರ್ಧಿನಿ'. ರಾಜಕುಮಾರ್ ಅವರು ಯಾವ ಬಿರುದು-ಬಾವಲಿಯನ್ನೂ ಪಡೆಯದಿದ್ದ ಕಾಲದಲ್ಲಿ ನಟಿಸಿದ ಬ್ಲ್ಯಾಕ್ & ವೈಟ್ ಸಿನಿಮಾವಿದು! ಈ ಸಿನಿಮಾ ತೆರೆಕಂಡದ್ದು 1959ರಲ್ಲಿ. ಅಂದರೆ, ಭರ್ತಿ61 ವರ್ಷಗಳ ಹಿಂದೆ! ಆ ವರ್ಷ ತಯಾರಾದ ಒಟ್ಟು ಕನ್ನಡ ಸಿನಿಮಾಗಳ ಸಂಖ್ಯೆ ಕೇವಲ ಆರು! ಅರವತ್ತೊಂದು ವರ್ಷಗಳ ಹಿಂದೆ 'ಮಹಿಷಾಸುರ ಮರ್ಧಿನಿ'ಯಂಥಾ ಕಪ್ಪು-ಬಿಳುಪು ಪೌರಾಣಿಕ ಚಿತ್ರವೊಂದು ಹಿಂದಿಯೂ ಸೇರಿದಂತೆ ಎಂಟು ಭಾಷೆಗಳಿಗೆ ಡಬ್ ಆಗಿ ಬಾಕ್ಸ್ ಆಫೀಸಿನಲ್ಲಿ ದಿಗ್ವಿಜಯ ಸಾಧಿಸಿರುವುದು ಸಣ್ಣ ಸಂಗತಿಯೇನಲ್ಲ! ರಾಜಕುಮಾರ್ ಅವರು ಮಹಿಷಾಸುರನ ಪಾತ್ರದಲ್ಲಿ ನಟಿಸಿದ್ದಾರೆ, ಚಾಮುಂಡೇಶ್ವರಿ ಪಾತ್ರದಲ್ಲಿ ನಟಿಸಿದವರು ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಹೆತ್ತಮ್ಮ ಶ್ರೀಮತಿ ಸಂಧ್ಯಾ! ನಾರದನಾಗಿ ಕೆ.ಎಸ್.ಅಶ್ವಥ್, ರಂಭೇಶನಾಗಿ ಉದಯಕುಮಾರ್, ವ್ಯಾಘ್ರಸಿಂಹನಾಗಿ ನರಸಿಂಹರಾಜು, ಗುಣವತಿಯಾಗಿ ಸಾಹುಕಾರ್ ಜಾನಕಿ ನಟಿಸಿದ 'ಮಹಿಷಾಸುರ ಮರ್ಧಿನಿ' ಚಿತ್ರ ಆ ಕಾಲದಲ್ಲೇ ಬೆಂಗಳೂರಿನಲ್ಲಿ ನೂರು ದಿನ ಪ್ರದರ್ಶಿತವಾಗಿ ದಾಖಲೆ ನಿರ್ಮಿಸಿತ್ತು.
ಈ ಚಿತ್ರದ ಮತ್ತೊಂದು ನಂಬಲಸಾಧ್ಯವಾದ ವಿಶೇಷವೆಂದರೆ, ನಿರ್ಮಾಪಕರು ತಮ್ಮ ನಾಯಕನಟನಿಗೆ ಕೊಟ್ಟ ಸಂಭಾವನೆಯದ್ದು! ಸಾಮಾನ್ಯವಾಗಿ ಅಗ್ರಿಮೆಂಟಿನಲ್ಲಿರುವಷ್ಟು ಸಂಭಾವನೆಯನ್ನು ಕೊಡದೇ ಸತಾಯಿಸುವ ಕನ್ನಡ ಚಿತ್ರ ನಿರ್ಮಾಪಕರ ನಡುವೆ ಒಪ್ಪಿರುವುದಕ್ಕಿಂತಲೂ ಎರಡು ಪಟ್ಟು ಹೆಚ್ಚು ಸಂಭಾವನೆಯನ್ನು ಕೊಟ್ಟ ದಿಗ್ಭ್ರಮೆ ಹುಟ್ಟಿಸುವ ಘಟನೆಯೊಂದು ಆಗ ನಡೆಯಿತು! ಇದು ನಿಜ. 'ಮಹಿಷಾಸುರ ಮರ್ಧಿನಿ' ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಉತ್ತೇಜಿತರಾದ ನಿರ್ಮಾಪಕ ಬಿ.ಎಸ್.ರಂಗಾ ಅವರು ರಾಜಕುಮಾರ್ ಅವರಿಗೆ ಮೊದಲು ಒಪ್ಪಿಕೊಂಡದ್ದಕ್ಕಿಂತಲೂ ಎರಡು ಪಟ್ಟು ಹೆಚ್ಚು ಸಂಭಾವನೆಯನ್ನು ನೂರನೇ ದಿನದ ಸವಿನೆನಪಿಗಾಗಿ ಉಡುಗೊರೆ ನೀಡಿ ಬೆನ್ನು ತಟ್ಟಿದ್ದೊಂದು ದಾಖಲೆಯಾಗಿ ಉಳಿದಿದೆ!
'ಮಹಿಷಾಸುರ ಮರ್ಧಿನಿ' ಚಿತ್ರದ ಇತರ ವಿವರಗಳಿಗೆ ಬರುವುದಿದ್ದರೆ : ಇದು ಆ ಕಾಲದಲ್ಲಿ ತೆರೆಕಂಡ ಒಂದು ಮಹತ್ವದ ಚಿತ್ರ. ಹಲವಾರು ಅದ್ದೂರಿ ಪೌರಾಣಿಕ ಸಿನಿಮಾಗಳನ್ನು ತಯಾರಿಸಿದ ಮದರಾಸಿನ 'ವಿಕ್ರಂ ಸ್ಟುಡಿಯೋ'ದ ಮಾಲೀಕರಾದ ಬಿ.ಎಸ್.ರಂಗಾ ಅವರು ಇತರ ಭಾಷಾ ಚಿತ್ರರಂಗಕ್ಕೆ ಸೆಡ್ಡು ಹೊಡೆದು ತಯಾರಿಸಿದ ಈ ಚಿತ್ರ ತನ್ನ ತಾಂತ್ರಿಕ ಶ್ರೀಮಂತಿಕೆಯಿಂದ ಗಮನ ಸೆಳೆಯಿತು. ಅಭಿನಯದ ದೃಷ್ಟಿಯಲ್ಲೂ ಒಬ್ಬರಿಗೊಬ್ಬರು ಪೈಪೋಟಿ ನೀಡಿದ್ದು ವಿಶೇಷವೇ. ಮಹಿಷಾಸುರನೆಂಬ ನೆಗೆಟಿವ್ ಪಾತ್ರದಲ್ಲಿ ರಾಜಕುಮಾರ್ ಮಿಂಚಿದರೆ, ಈ ಪಾತ್ರವನ್ನು ಸಂಹರಿಸುವ ಚಾಮುಂಡೇಶ್ವರಿ ಪಾತ್ರದಲ್ಲಿ ಸಂಧ್ಯಾ ಗಮನ ಸೆಳೆದಿದ್ದರು.
ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಭಗವಾನ್ ವಿಷ್ಣು ಪಾತ್ರದಲ್ಲಿ ಚಿತ್ರಸಾಹಿತಿ ಚಿ|ಉದಯಶಂಕರ್ ಮನೋಜ್ಞವಾಗಿ ನಟಿಸಿದ್ದು! ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದ್ದು ಇದೇ ಉದಯಶಂಕರ್ ತಂದೆ ಚಿ|ಸದಾಶಿವಯ್ಯ. ಅಂದಹಾಗೆ, ರಾಜಕುಮಾರ್ ಅವರು ಪ್ರಪ್ರಥಮವಾಗಿ ಗಾಯಕರಾಗಿ ಪರಿಚಯವಾದದ್ದೂ ಇದೇ ಸಿನಿಮಾದ ಮೂಲಕವೇ. ಇವರು ಗಾಯಕಿ ಎಸ್.ಜಾನಕಿ ಜತೆ ಹಾಡಿರುವ 'ತುಂಬಿತು ಮನವಾ ತಂದಿತು ಸುಖವಾ' ಎಂಬ ಯುಗಳಗೀತೆ ಈಗಲೂ ಜನಪ್ರಿಯ. ಒಟ್ಟು ಒಂದು ಡಜನ್ ಹಾಡುಗಳಿರುವ ಈ ಚಿತ್ರಕ್ಕಾಗಿ ಸಂಗೀತ ಸಂಯೋಜನೆ ಮಾಡಿದ್ದು ಜಿ.ಕೆ.ವೆಂಕಟೇಶ್. ಮದರಾಸಿನ 'ವಿಕ್ರಂ ಸ್ಟುಡಿಯೋ'ದಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಚಿತ್ರವಿದು! ಸ್ವತಃ ಅತ್ಯುತ್ತಮ ಛಾಯಾಗ್ರಾಹಕರಾಗಿದ್ದ ಬಿ.ಎಸ್.ರಂಗಾ ತಾವು ನಿರ್ಮಿಸಿದ ಈ ಚಿತ್ರಕ್ಕೂ ಕ್ಯಾಮೆರಾ ಹಿಡಿದಿದ್ದರು!
^^^^^^^^^^^^^^^^^^^^^^^^^^^^^^^^^^^^^^^^^^^^^^^^
◆ ಎಂದೂ ಹಳತಾಗದ ಹಳೆಯ ಸಿನಿಮಾಗಳ ರೋಚಕ ವಿವರಗಳು 'ಬೆಳ್ಳಿತೆರೆಯ ಬಂಗಾರದ ಗೆರೆ' ಪುಸ್ತಕದಲ್ಲಿರುತ್ತದೆ...◆

Social Plugin