ಆನ್‍ಲೈನ್ ಮೂಲಕ ಗಾನ ಲಹರಿ ಹರಿಸುತ್ತಿರುವ ರೇವಣಸಿದ್ದ
ಆಕಾಶವಾಣಿ, ದೂರದರ್ಶನ ಕಲಾ ಪ್ರತಿಭೆಯ ಸಾಧನೆ
-ಮಲ್ಲಿಕಾರ್ಜುನ ತುಂಗಳ
ಸದಾ ಸ್ವರ, ರಾಗ, ತಾಳ, ಭಾವ, ಲಯಗಳ ಗುಂಗಿನಲ್ಲೇ ವಿಹರಿಸುತ್ತಿದ್ದ ಸಂಗೀತ ಲೋಕ ಕೊರೊನಾ ಸಂಕಷ್ಟದಿಂದ ಕಳೆಗುಂದಿದೆ. ಕಲಾವಿದರ ಬದುಕು ಈಗಲೂ ಮೂರಾಬಟ್ಟೆಯಾಗಿದೆ. ಕಲಾಲೋಕದಲ್ಲೇ ಇದ್ದು, ಕೇಳುಗರಿಗೆ ಮಾನಸಿಕ ನೆಮ್ಮದಿ ನೀಡುತ್ತಿದ್ದ ಕಲಾವಿದರು ಇಂದು ಸಂಕಷ್ಟದಿಂದ ಪಾಡು ಪಡುತ್ತಿದ್ದಾರೆ. ಇತರ ಯಾವದೇ ಆದಾಯ ಮೂಲವಿದ್ಲದೆ ಸಂಗೀತದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಹಲವಾರು ಬಡ ಕಲಾವಿದರ ಕುಟುಂಬ ಬೀದಿಗೆ ಬಿದ್ದಿದೆ. ಇಂಥಹ ಸಂಕಷ್ಟದ ದಿನಗಳಲ್ಲಿಯೂ ಕೆಲ ಬಡಕಲಾವಿದರು ಆತ್ಯಹತ್ಯೆಯಂಥ ಕಠಿಣ ನಿರ್ಧಾರವನ್ನೂ ತೆಗೆದುಕೊಂಡಿರುವದು ಕಲಾಪ್ರಪಂಚದ ದುರಂತ.
ಈ ಎಲ್ಲ ವಿಕ್ಷಿಪ್ತ ಮನಸ್ಸುಗಳಿಗೆ, ಕಲಾದೇವತೆಗೆ ಕಿಂಚಿತ್ತೂ ಅನ್ಯಾಯವಾಗದಂತೆ ಕಲಾಪ್ರೇಮಿಗಳಿಗೆ ಸಂಗೀತ ಸೇವೆಗೆಂದೇ ಫೇಸ್‍ಬುಕ್ ಆನ್‍ಲೈನ್ ಮೂಲಕ ಉಚಿತವಾಗಿ ಸಂಗೀತದ ರಸದೌತನ ನೀಡುವಲ್ಲಿ ಇಲ್ಲೊಂದು ತಂಡ ಮುಂದಾಗಿರುವದು ವಿಶೇಷವೇ ಸರಿ.
ಕಲಾವಿದರಿಗೆ ಸಂಗೀತವೇ ಶಸ್ತ್ರ, ಸಂಗೀತವೇ ಶಕ್ತಿ. ಇದೇ ಜೀವನ ಸ್ಪೂರ್ತಿ. ಕೊರೊನಾದಿಂದ ಯಾವದೇ ಕಾರ್ಯಕ್ರಮಗಳು ದೊರಕದಿದ್ದರೂ ಕಳೆದ ನಾಲ್ಕೈದು ತಿಂಗಳಲ್ಲಿ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಬೀದರ ಜಿಲ್ಲೆಯ ಹುಮನಾಬಾದ್ ಪಟ್ಟಣದ ರೇವಣಸಿದ್ದಯ್ಯ ಮಠರಿಂದ ರಚಿತಗೊಂಡ `ಸಾನ್ವಿ ಮೆಲೋಡಿಸ್’ನದ್ದಾಗಿದೆ. ಸಾವಿರಾರು ಪ್ರೇಕ್ಷಕರನ್ನು ಗುಂಪಿನಲ್ಲಿ ಸೇರಿಕೊಂಡಿರುವ ಈ ತಂಡದಿಂದ ವಾರದ ಎರಡು ಮೂರು ದಿನಗಳು ನಾಲ್ಕೈದು ಗಂಟೆಯಷ್ಟು ಎಡೆಬಿಡದೆ ಗಾಯನ ಸುಧೆ ಹರಿಸುತ್ತಾ, ಅಭಿಮಾನಿಗಳಿಗೆ ತಕ್ಕಂತೆ, ಪ್ರೇಕ್ಷಕರ ಬೇಡಿಕೆಗಣುಸಾರ ಬೇಕಾದ ಗೀತೆಗಳನ್ನು ತತ್‍ಕ್ಷಣದಲ್ಲಿಯೇ ಹಾಡುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಮೂಲತಃ ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಹಿರೇಮಠ ಮನೆತನದ ಬಡಕುಟುಂಬದಲ್ಲಿ ಮಲ್ಲಯ್ಯಸ್ವಾಮಿ ಹಾಗು ಅನ್ನಪೂರ್ಣ ದಂಪತಿಯ ಉದರದಲ್ಲಿ ಜನ್ಮ ತಾಳಿದ ರೇವಣಸಿದ್ದಯ್ಯ ಮಠ ಹಾಸ್ಯ ಕಲೆಯೊಂದಿಗೆ ಬದುಕಿನ ಗೂಡು ಕಟ್ಟಿಕೊಂಡು ಕೆಲವೇ ದಿನಗಳಲ್ಲಿ ನಾಡಿನಾದ್ಯಂತ ಮನೆ ಮಾತಾಗುವಲ್ಲಿ ಕಾರಣವಾಗುವದಲ್ಲಿದೆ ಇದೀಗ ಎಲ್ಲ ಹಾಡುಗಳಿಗೂ ಸೈ ಎನ್ನುವಂತೆ ಜನ ಮೆಚ್ಚುಗೆ ಪಡೆದ ಬಹುಮುಖ ಪ್ರತಿಭಾವಂತ ಕಲಾವಿದ!
ಹಾಸ್ಯ, ಗಾಯನ, ಸ್ವ-ರಚಿತ ಗೀತೆಗಳ ಗಾಯನ, ಹಾವ-ಭಾವ, ಸಂಭಾಷಣೆ, ಮಿಮಿಕ್ರಿ, ಸಭಿಕರ ನಿದ್ದೆಗೆಡಿಸುವ ಅಚ್ಚುಕಟ್ಟಾದ ನಿರೂಪಣಾ ಶೈಲಿಯಿಂದ ಜನಮಾನಸದಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ. ಇವರ ಕಾರ್ಯವ್ಯಾಪ್ತಿ ಬೀದರ್ ಜಿಲ್ಲೆಗೆ ಅಷ್ಟೇ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ, ತೆಲಂಗಾಣ, ಆಂಧ್ರ ಹಾಗು ಮಹಾರಾಷ್ಟ್ರದಲ್ಲಿಯೂ ಹೆಸರು ಪಡೆದವರಾಗಿದ್ದಾರೆ.
ಹಿರಿಮೆ ಹೆಚ್ಚಿಸಿದ ಪ್ರಶಸ್ತಿಗಳು: ಹುಮನಾಬಾದ್ ಕನ್ನಡ ಸಾಹಿತ್ಯ ಪ್ರಶಸ್ತಿ, ನೆಹರು ಯುವ ಕೇಂದ್ರ, ಸ್ವಾಮಿ ವಿವೇಕಾನಂದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಸೇವೆ ಗುರುತಿಸಿ ಸರ್ಕಾರದ ಅಕಾಡೆಮಿಗಳು ನೀಡುವ ರಾಜ್ಯಮಟ್ಟದ ಪ್ರಶಸ್ತಿಗಳು ಸಿಗಬೇಕು ಎನ್ನುವದು ರೇವಣಸಿದ್ಧ ಅವರ ಗುರುವಾದ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರ ಅಭಿಮತವಾಗಿದೆ.
ನೆರವು ಅನಿವಾರ್ಯವಾಗಿದೆ: ಈ ಕಲಾವಿದನಿಗೆ ಕಲೆಯೇ ಆಸ್ತಿ, ಕಲೆಯನ್ನು ಮೆಚ್ಚಿ ಪ್ರೇಕ್ಷಕರು ನೀಡುವ ಅಷ್ಟಿಷ್ಟು ಹಣವೇ ಬದುಕಿಗೆ ಕೊಂಚ ಆಶ್ರಯ. ಬಡ ಕುಟುಂಬದ ನೊಗ ಹೊತ್ತು ಕುಟುಂಬದ ಜವಾಬ್ದಾರಿ ಈತನ ಮೇಲಿದೆ. ಸಾಧಿಸಬೇಕು ಎಂಬ ಛಲದೊಂದಿಗೆ ಮುನ್ನುಗ್ಗುತ್ತಿರುವ ರೇವಣಸಿದ್ದರಂಥ ಬಡ ಕಲಾವಿದರನ್ನು ಗುರ್ತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ.
ಈ ಕಲಾವಿದನ ಕಲೆಗೆ ಮೆಚ್ಚಿದ ಜನ ಸಾಕಷ್ಟು ಕಾರ್ಯಕ್ರಮಗಳನ್ನು ಒದಗಿಸುತ್ತಾ ಬಂದಿದ್ದಾರೆ. ಇದೀಗ ಕಾರ್ಯಕ್ರಮಗಳಿಗೆ ಅವಕಾಶವಿಲ್ಲದ ಕಾರಣ ರೇವಣಸಿದ್ಧನ ಕುಟುಂಬ ಅತಂತ್ರ ಸ್ಥಿತಿಯಂತಾಗಿದೆ. ಇವರನ್ನು ಸಂಪರ್ಕಿಸಲು 84319-02420 ಸಹಾಯಕ್ಕೆ ಸಹಕರಿಸಲು ಅನುಕೂಲ.
ಹಾಸ್ಯದ ಮೋಡಿಗಾರ ಈ ಸಿದ್ಧ:
ಚಿಕ್ಕಂದಿನಿಂದಲೂ ಶಾಲೆಯಲ್ಲಿ ಡಾನ್ಸ್, ಭಕ್ತಿಗೀತೆ, ಏಕಪಾತ್ರಾಭಿನಯ, ನಾಟಕ ಮಾಡಿ ಯಶಸ್ಸು ಗಳಿಸಿದವರು ರೇವಣಸಿದ್ದಯ್ಯ ಮಠ.
ನಂತರ ಹಾಸ್ಯ, ಮಿಮಿಕ್ರಿ, ಜಾನಪದ ಹಾಡು, ನೃತ್ಯ ಹಲವು ಕಲಾಪ್ರಕಾರಗಳ ಮೈಗೂಡಿಸಿಕೊಂಡು ಕಾಲೇಜು ದಿನಗಳಲ್ಲಿ ಸದಾ ವೇದಿಕೆಯ ಮುಖ್ಯ ವ್ಯಕ್ತಿಯಾಗಿ ಕಾಣಿಸಿಕೊಂಡವರು.
ಜಾನಪದ ಹಾಗು ಸಿನಿಮಾ ಹಳೆಯ ಹಾಡುಗಳನ್ನು ತಮ್ಮದೇಯಾದ ಹಾಸ್ಯದ ಶೈಲಿಯಲ್ಲಿ ಹಾಡಿ ನೃತ್ಯ ಮಾಡಿದ ವಿಡಿಯೋ ತುಣುಕುಗಳು, ಯೂಟ್ಯುಬ್‍ನಲ್ಲಿ ಸದ್ದು ಮಾಡುತ್ತಿವೆ.
ಬೀದರ್ ಜಿಲ್ಲೆಯ ವಿಶಿಷ್ಟ ಜಾನಪದ ಶೈಲಿಯ ಮಾತು, ಹರಟೆ, ಹಾಡು, ಮಿಮಿಕ್ರಿಗಳ ವಿಡಿಯೋ ಸಿದ್ಧಗೊಳಿಸಿ, ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿ ಜನಮನ ರಂಚಿಸುವದು ಇವರ ಹವ್ಯಾಸ.
ಆನ್‍ಲೈನ್‍ನಲ್ಲಿ ಸದ್ದು:
ಇವರ ಹಾಸ್ಯಭರಿತ ಜಾನಪದ, ಹಳೆಯ ಸಿನಿಮಾ ಹಾಡು-ನೃತ್ಯದ 40 ಕ್ಕೂ ಅಧಿಕ ವಿಡಿಯೋ ತುಣುಕಗಳು ಡಬ್ ಸ್ಮ್ಯಾಷ್ ಮೂಲಕ ವೈರಲ್ ಆಗಿವೆ. ಸದ್ಯ ಆನ್‍ಲೈನ್‍ದಲ್ಲಿ ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಈ ಹಾಸ್ಯ ಮೊಡಿಗಾರ.
`ಕೂಲಿ ಮಾಡೋ ಕಳ್ಲ ನನ್ನ ಮಕ್ಕಳು ಹೀರೋ ಹೋಂಡಾ ಕೇಲ್ತಾರ’.. ಫನ್ನಿ ವಿಡಿಯೋ ಅಪ್‍ಲೋಡ್ ಮಾಡಿದ 10 ದಿನಗಳಲ್ಲಿಯೇ ಮಿಲಿಯನ್‍ದಷ್ಟು ಪ್ರತಿಕ್ರಿಯೆ ಬಂದಿವೆ. ಬೆಂಗಳೂರಿನ ಯುವತಿಯೊಂದಿಗೆ ಮಾಡಿದ ಜಾನಪದ ಹಾಡಿನ ಈ ನೃತ್ಯದ ಮೋಡಿ, ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.
ಬಹಳ ಒಳ್ಳೆ ನಮ್ಮ ಮಿಸ್ಸು, ಮಣ್ಣಿನ ಮಗನಾಗೋ ಅಣ್ಣಯ್ಯ, ಅತ್ತಿ ಅತ್ತಿ ಸೋದರತ್ತಿ, ಅಕ್ಕ ನಿನ್ನ ಮಗಳು, ದಂಡ ಪಿಂಡಗಳು, ಜಾನಪದ ಹಾಡಿನ ಅನೇಕ ಕಾಮಿಡಿ ವಿಡಿಯೋ ತುಣುಕುಗಳಿಂದ ಆನ್‍ಲೈನ್‍ನಲ್ಲಿ ಜನಪ್ರಿಯರಾಗಿದ್ದಾರೆ. ಪೇಜ್ ಕ್ರಿಯೇಟರ್ ಆನಂದ ಅವರಿಂದಾಗಿ ಉತ್ತರ ಕರ್ನಾಟಕದ ಜನರಿಂದ ತಮಗೆ ಹೆಚ್ಚು ಮೆಚ್ಚುಗೆ ಸಿಕಿದೆ ಎಂದು ಹೇಳುತ್ತಾರೆ. ರೇವಣಸಿದ್ಧಯ್ಯ ಮಠ. ಇವರ ಅದೆಷ್ಟೋ ಫನ್ನಿ ಕಾಮಿಡಿ ಸಾಂಗ್ಸ್, ಡಾನ್ಸ್, ಯುವಜನರ ರಂಜಿಸುತ್ತಿವೆ. ಜನತೆ ತಮ್ಮೂರ ಆರಾಧ್ಯ ದೈವ ವೀರಭದ್ರದೇವರ ಕುರಿತು ಸಾಹಿತ್ಯ ರಚಿಸಿ ಹಾಡಿದ ಭಕ್ತಿಗೀತೆಗಳ ಸಿಡಿ ಕೂಡ ಬಿಡುಗಡೆಯಾಗಿವೆ.
ಸಾನ್ವಿ ಮೆಲೋಡೀಸ್: ಸದ್ಯ ಸಾನ್ವಿ ಮೆಲೋಡೀಸ್ ತಂಡವೆಂದು ರಚಿಸಿ ಎಲ್ಲೆಡೆ ಮನೆ ಮಾತಾಗಿರುವ ರೇವಣಸಿದ್ದಯ್ಯ ಮಠ ಆಕಾಶವಾಣಿ ಹಾಗು ದೂರದರ್ಶನದಲ್ಲಿಯೂ ತಮ್ಮ ಕಲಾ ಪ್ರತಿಭೆಯನ್ನು ತೋರಿಸುವಲ್ಲಿ ಯಶಸ್ಸು ಕಂಡವರು. ಇಂಥಹ ಮುಗ್ಧ ಹಾಗು ಬಡಕಲಾವಿದರ ಸಹಾಯಕ್ಕೆ ಮುಂದಾಗುವ ಮೂಲಕ ಕಲೆಯನ್ನು ಶ್ರೀಮಂತಗೊಳಿಸುವದು ಕಲಾಪ್ರೇಮಿಗಳ ಸಹಾಯವೂ ಅಗತ್ಯವಾಗಿದೆ. ಮಾಹಿತಿಗೆ 90356-73143 ಸಂಪರ್ಕಿಸಬಹುದು.

Social Plugin