ರಬಕವಿ-ಬನಹಟ್ಟಿ ಮಧ್ಯ ರಾಮಪೂರದಲ್ಲಿನ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬದಿಂದ ಪ್ರಯಾಣಿಕರು ಪ್ರಯಾಸ ಪಡುತ್ತಿರುವದು.
ರಸ್ತೆ ದುರಸ್ತಿಗೆ ನಿರ್ಲಕ್ಷ್ಯ: ಪ್ರಯಾಣ ಪ್ರಯಾಸ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ನ24: ಕಳೆದ ಮಳೆಗಾಲದ ಸಂದರ್ಭ ಮಳೆರಾಯ ತನ್ನ ಅಟ್ಟಹಾಸ ಮೆರೆದ ಕಾರಣ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಮುಧೋಳ-ಬನಹಟ್ಟಿ, ರಬಕವಿ-ಮದನಮಟ್ಟಿ, ರಬಕವಿ-ತೇರದಾಳ ಒಳಗೊಂಡು ರಬಕವಿ-ಬನಹಟ್ಟಿ ನಗರದ ಎಲ್ಲ ವಾರ್ಡ್‍ಗಳಲ್ಲಿನ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಸದ್ಯ ದುರಸ್ಥಿ ಒಂದು ಸವಾಲಾಗಿ ಪರಿಣಮಿಸಿದೆ.
ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಸೇರಿದ ಬನಹಟ್ಟಿಯ ನೂಲಿನ ಗಿರಣಿಯಿಂದ ರಬಕವಿಯ ಹೊಸ ಬಸ್ ನಿಲ್ದಾಣದವರೆಗೆ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆದಿದೆ. ಪ್ರಮುಖವಾಗಿ ಬಸ್ ನಿಲ್ದಾಣ, ರಾಮಪೂರ ಹಾಗು ಹೊಸೂರ ರಸ್ತೆಗಳು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ವಾಹನ ಚಾಲಕರು, ಸಾರ್ವಜನಿಕರ ಪ್ರಯಾಣ ಪ್ರಯಾಸವಾಗುತ್ತಿದೆ.
ರಸ್ತೆ ಕಾಮಗಾರಿ ನಡೆಯುತ್ತಿದೆ ಎಂಬ ಭಾವನೆ ಜನತೆಯದ್ದಾಗಿದ್ದರೆ, ಕಾಮಗಾರಿಗೆ ಪೂರಕವಾದ ಸಾಮಗ್ರಿಗಳೇ ಕಾಣುವದಿಲ್ಲ. ಎಂದೋ ಒಂದು ದಿನ ಕಂಡ ಕಾಮಗಾರಿಯನ್ನು ನೋಡಿದ ಜನ ನಿಟ್ಟುಸಿರು ಬಿಟ್ಟರೆ ಮತ್ತೇ ಮರು ದಿನ ಕಾಣುವದೇ ಇಲ್ಲ. ಲೋಕೋಪಯೋಗಿ ಇಲಾಖೆಗೆ ಸೇರಿದ ಕಾಮಗಾರಿಯಾಗಿದ್ದು, ಯಾವ ಪುರುಷಾರ್ಥಕ್ಕಾಗಿ ಕಾಮಗಾರಿ ನಡೆಸುತ್ತಿದ್ದಾರೆಂಬ ಹಿಡಿಶಾಪ ಜನಸಾಮಾನ್ಯರದ್ದಾಗಿದೆ.
ಹರಸಾಹಸ: ಸುಮಾರು 3 ಕಿ.ಮೀ. ರಸ್ತೆ ಕ್ರಮಿಸಲು ಸುಮಾರು 20 ನಿಮಿಷ ವ್ಯಯಿಸಬೇಕಿದೆ. ಈ ರಸ್ತೆ ಕಾಮಗಾರಿಯೆಂದು ಕಳೆದ ಆರೇಳು ತಿಂಗಳಿಂದ ನಡೆಯುತ್ತಿದೆ. ಈಗಷ್ಟೇ ಮಾಡಿದ ರಸ್ತೆ ಮತ್ತೇ ಹದಗೆಡುತ್ತಿದ್ದಾಗ್ಯೂ ಕಾಮಗಾರಿ ಮಾತ್ರ ನಡೆಯದಿರುವದು ವಿಪರ್ಯಾಸದ ಸಂಗತಿ.
ಈಗಷ್ಟೇ ಡಾಂಬರೀಕರಣಗೊಂಡ ರಸ್ತೆ ಸಂಪೂರ್ಣವಾಗದ ಕಾರಣ ಅಲ್ಲಲ್ಲಿ ಕಿತ್ತು ಹೋಗುತ್ತಿದೆ. ಸದ್ಯ ಸಕ್ಕರೆ ಕಾರ್ಖಾನೆಗಳು ಎಲ್ಲೆಂದರಲ್ಲಿ ಪ್ರಾರಂಭವಾಗಿದ್ದು, ಕಬ್ಬಿನ ಟ್ರ್ಯಾಕ್ಟರ್‍ಗಳದ್ದೇ ದರಬಾರ್ ನಡೆಯುತ್ತಿದೆ. ಇದರಿಂದ ಕಾರು, ಅಟೋ, ಸಣ್ಣ ಪುಟ್ಟ ವಾಹನಗಳವರು ಬಾಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆಂದು ಜನತೆಯ ಅಳಲಾಗಿದೆ.
ಅಪಘಾತ ಇಲ್ಲಿ ಸಾಮಾನ್ಯ: ರಬಕವಿ-ಬನಹಟ್ಟಿ ನಗರ ಮಧ್ಯ ರಾಮಪೂರ ಹತ್ತಿರ ರಸ್ತೆ ಕಾಮಗಾರಿ ನೆಪದಲ್ಲಿ ಬಾರಿ ಕಲ್ಲುಗಳನ್ನು ರಸ್ತೆ ಮೇಲೆ ಹಾಕಿದ್ದು, ವಾಹನ ಸಂಚಾರ ಸಂದರ್ಭ ಧೂಳು ತುಂಬಿಕೊಂಡೇ ಮುಂದೆ ಸಾಗಬೇಕು. ಬೈಕ್ ಸವಾರರಂತು ಯಮಯಾತನೆ ಅನುಭವಿಸುತ್ತಿದ್ದು, ಈ ಪ್ರದೇಶದಲ್ಲಿ ದಿನಂಪ್ರತಿ ಅಪಘಾತಗಳು ಸಾಮಾನ್ಯವಾಗಿವೆ.
ಸಂಪೂರ್ಣ ಹಾಳಾಗಿದ್ದರೂ ಕಾಮಗಾರಿ ವಿಳಂಬಕ್ಕೆ ಜನರು ಹಿಡಿಶಾಪ ಹಾಕುತ್ತ ಸಂಚರಿಸುವಂತಾಗಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ಕಾಮಗಾರಿ ತೀವ್ರಗೊಳಿಸಬೇಕಿದೆ.
Social Plugin